ನ್ಯೂಸ್ ನಾಟೌಟ್: ಚಂಪಾಷಷ್ಠಿ, ಬ್ರಹ್ಮರಥೋತ್ಸವ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಮಾರ್ಗಶಿರ ಶುದ್ಧ ಷಷ್ಠಿಯ ದಿನ ಕುಕ್ಕೆ ಕ್ಷೇತ್ರದಲ್ಲಿ ಮುಂಜಾನೆಯ 7.05ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥಾರೋಹಣವಾಗುತ್ತದೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕಿಯಲ್ಲಿ ಬಂದು, ಉಮಾಮಹೇಶ್ವರದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲೂ ವಿರಾಜಮಾನರಾಗುತ್ತಾರೆ. ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಟಿಯಾಗುತ್ತದೆ. ಮೊದಲಿಗೆ ಪಂಚಮಿರಥವನ್ನು ಎಳೆದು ನಂತರ ಶ್ರೀ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮರಥೋತ್ಸವವು ಜರುಗುತ್ತದೆ. ಭಕ್ತಾದಿಗಳು ತಮ್ಮ ಹರಕೆಯಂತೆ, ಕಾಳುಮೆಣಸು, ಹಣ ಮತ್ತು, ಏಲಕ್ಕಿ ಇತ್ಯಾದಿ ದವಸಧಾನ್ಯಗಳನ್ನು ರಥಕ್ಕೆ ಎಸೆದು ರಥವನ್ನು ಎಳೆಯುವುದರ ಮೂಲಕ ಧನ್ಯರಾಗುತ್ತಾರೆ.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಟಿ ಮಹೋತ್ಸವದ ಅಂಗವಾಗಿ ಬುಧವಾರ ಮಾರ್ಗಶಿರ ಶುದ್ಧ ಸಪ್ತಮಿಯಂದು ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರ ಅವಧೃತೋತ್ಸವ ಮತ್ತು ನೌಕಾವಿಹಾರ ನಡೆಯಲಿರುವುದು. ಈ ಮೊದಲು ಓಕುಳಿ ಪೂಜೆ, ಓಕುಳಿ ಸಂಪೋಕ್ಷಣೆಯ ಬಳಿ ದೇವರು ಅವಧೃತಕ್ಕೆ ತೆರಳಲಿದ್ದಾರೆ. ಈ ನಡುವೆ ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಲಿದೆ. ಇದಕ್ಕೂ ಮುನ್ನ ಸೋಮವಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ಪಂಚಮಿ ಉತ್ಸವದಂದು 163 ಭಕ್ತರಿಂದ ಎಡೆಸ್ನಾನ ಸೇವ ನೆರೆವೇರಿತು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ತಾನ ಹರಕೆ ಸಲ್ಲಿಸಿದರು. ಇಂದು (ಮಂಗಳವಾರ) ಕೂಡ ಭಕ್ತಾಧಿಗಳು ಎಡೆಸ್ತಾನ ಸೇವೆ ನೆರೆವೇರಿಸುವುದರೊಂದಿಗೆ ಸಮಾಪ್ತಿಯಾಗಲಿದೆ