ನ್ಯೂಸ್ ನಾಟೌಟ್ : ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ಜೋಯಿ ವಿ.ಡಿ.ಎಂಬವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಗಳಾದ ನವನೀತ್, ರಾಹುಲ್ ಹಾಗೂ ಸುಜಿತ್ರವರಿಗೆ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಪ್ರಕರಣದ ಸಂತ್ರಸ್ತರಾಗಿರುವ ಜೋಯಿ ವಿ.ಡಿ.ಅವರು ಅ.೪ರಂದು ರಾತ್ರಿ ೧೧ ಗಂಟೆಯ ವೇಳೆಗೆ ಅಡ್ಡಹೊಳೆ ಚರ್ಚ್ನಲ್ಲಿದ್ದ ಸಂದರ್ಭ ಅಲ್ಲಿಗೆ ಬಂದ ಪರಿಚಯದ ನವನೀತ್ ಎಂಬವರು ಶಿರಾಡಿ ತನಕ ಬಿಡುವಂತೆ ತನ್ನನ್ನು ಕೇಳಿಕೊಂಡ ಮೇರೆಗೆ ಜೋಯಿ ವಿ.ಡಿ.ಯವರು ನವನೀತ್ ರನ್ನು ತನ್ನ ಸ್ಕೂಟರ್ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಶಿರಾಡಿ ಗ್ರಾಮದ ಪುಲ್ಲೋಟು ಎಂಬಲ್ಲಿಗೆ ತಲುಪಿದಾಗ ನವನೀತರವರು ಸ್ಕೂಟರ್ ನಿಲ್ಲಿಸುವಂತೆ ಹೇಳಿದ್ದು ಅದರಂತೆ ಸ್ಕೂಟರ್ ನಿಲ್ಲಿಸಿದಾಗ ಅಲ್ಲೆ ಪಕ್ಕದಲ್ಲಿ ಅಟೋ ರಿಕ್ಷಾವೊಂದು ನಿಂತಿದ್ದು ರಿಕ್ಷಾದಲ್ಲಿದ್ದ ಪರಿಚಯಸ್ಥರಾದ ರಾಹುಲ್ ಹಾಗೂ ಸುಜಿತ್ ಎಂಬವರು ಇಳಿದು ಬಂದು ಬಳಿಕ ಮೂವರೂ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಕೂಟರನ್ನು ಜಖಂಗೊಳಿಸಿದ್ದಾರೆ ಎಂದು ಜೋಯಿಯವರು ನೀಡಿದ್ದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.