ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಮೂರು ಹೆಣಗಳು ಬಿದ್ದಿವೆ. ಕಾನೂನು ವ್ಯವಸ್ಥೆಯನ್ನೇ ಕೋಮು ದಳ್ಳುರಿ ಬುಡಮೇಲಾಗಿಸಿದೆ. ಮಸೂದ್, ಪ್ರವೀಣ್, ಫಾಜಿಲ್ ಎಂಬ ಅಮಾಯಕ ಯುವಕರು ಬಲಿಯಾಗಿ ಬಿಟ್ಟಿದ್ದಾರೆ.
ಹೌದು, ಕರಾವಳಿ ಯಾವಾಗಲೂ ಸೂಕ್ಷ್ಮ ಪ್ರದೇಶ. ಇಲ್ಲಿ ಧರ್ಮದ ಹೆಸರಿನಲ್ಲಿ ಯಾವಾಗ ಎಲ್ಲಿ ಏನು ಬೇಕಾದರೂ ಸಂಭವಿಸಬಹುದು. ಸಣ್ಣ ವಿಚಾರದಿಂದ ಹತ್ತಿಕೊಂಡ ಕಿಡಿ ದೊಡ್ಡ ಮಟ್ಟಕ್ಕೆ ತಲುಪಿಬಿಡುತ್ತೆ. ಅದರಲ್ಲೂ ಚುನಾವಣೆ ಬಂತೆಂದರೆ ಮುಗಿದೇ ಬಿಟ್ಟಿತ್ತು. ಕರಾವಳಿಯಲ್ಲಿ ಕೋಮುದ್ವೇಷಕ್ಕೆ ರಕ್ತಪಾತವೇ ಆಗಿಬಿಡುತ್ತೆ. ಅದು ಬಿಜೆಪಿ ಇರಲಿ ಅಥವಾ ಕಾಂಗ್ರೆಸ್ ಸರಕಾರವೇ ಇರಲಿ. ಅಮಾಯಕರ ಜೀವ ಬಲಿಯಂತೂ ಗ್ಯಾರಂಟಿ.
ಇಷ್ಟೆಲ್ಲ ಆದ್ರೂ ಸರಕಾರ ಮಾತ್ರ ಇನ್ನೂ ಸುಮ್ಮನೆ ಕುಳಿತಿದ್ಯಾ ಅನಿಸ್ತಿದೆ. ಇಷ್ಟು ವರ್ಷ ಆದ್ರೂ ಕರಾವಳಿ ಭಾಗದ ಅದೆಷ್ಟೋ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ರಾಜ್ಯ ಸರಕಾರಕ್ಕೆ ಇದುವರೆಗೆ ಪೊಲೀಸ್ ಇಲಾಖೆಯ ನೇಮಕಾತಿಯನ್ನು ಭರ್ತಿ ಮಾಡುವುದಕ್ಕೆ ಏಕೆ ಸಾಧ್ಯವಾಗಿಲ್ಲ? ಕರಾವಳಿಗೆ ಹೆಚ್ಚಿನ ಪೊಲೀಸ್ ಫೋರ್ಸ್ ಕೊಡುವುದಕ್ಕೆ ಏಕೆ ಆಗಿಲ್ಲ? ಈ ನಿರ್ಲಕ್ಷ್ಯದ ಕಾರಣದಿಂದಲೇ ಕರಾವಳಿಯಲ್ಲಿ ಇಂದು ಅಮಾಯಕ ಜೀವಗಳು ಬಲಿಯಾಗುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿದೆ. ಎರಡೂ ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿಯಿಲ್ಲ. ಹೆಚ್ಚಿನ ಪೊಲೀಸರು ಎರಡೂ ಶಿಫ್ಟ್ಗಳಲ್ಲಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ಉದಾಹರಣೆ ನೀಡುವುದಾದರೆ ದಕ್ಷಿಣ ಕನ್ನಡದ ಒಂದು ಪೊಲೀಸ್ ಠಾಣೆಯಲ್ಲಿ ಇಪ್ಪತ್ತೈದು ಗ್ರಾಮಕ್ಕೆ ಇರೋದು ಕೇವಲ ೪೦ ಪೊಲೀಸರು. ಅದರಲ್ಲೂ ಎರಡು ಶಿಫ್ಟ್ ಮಾಡಿ ನೋಡುವುದಾದರೆ ಕೆಲವರು ರಜೆ, ಇನ್ನೂ ಕೆಲವರು ಸೆಕೆಂಡ್ ಶಿಫ್ಟ್ ನಿಂದಾಗಿ ಮೊದಲ ಶಿಫ್ಟ್ ನಲ್ಲಿ ಡ್ಯೂಟಿಯಲ್ಲಿ ಇರುವ ಪೊಲೀಸರ ಸಂಖ್ಯೆ ಕೇವಲ ಹತ್ತು..! ಇಂದು ಜಗತ್ತು ಅತೀ ವೇಗದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪೊಲೀಸ್ ಪಡೆ ಮಾತ್ರ ಇದ್ದಂತೆ ಇದೆ. ಸರಿಯಾದ ಸಮಯಕ್ಕೆ ನೇಮಕಾತಿ ಆಗುತ್ತಿಲ್ಲ. ಅದರಲ್ಲೂ ಪಿಎಸ್ಐ ನಂತಹ ಹಗರಣಗಳ ಸರಮಾಲೆ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪ್ರವೀಣ್ ಮನೆಗೆ ಸಾಂತ್ವಾನ ಹೇಳುವುದಕ್ಕೆ ಸಿಎಂ ಬೊಮ್ಮಾಯಿ, ಗೃಹ ಸಚಿವ ಅರಗ ಸೇರಿದಂತೆ ವಿವಿಧ ನಾಯಕರು ಮೊನ್ನೆಯಷ್ಟೇ ಬಂದಿದ್ದರು. ಈ ವೇಳೆ ಇಡೀ ಮಂಗಳೂರಿನ ಪೊಲೀಸ್ ಫೋರ್ಸ್ ರಾಜಕಾರಣಿಗಳ ಭದ್ರತೆ ನೀಡುವುದರಲ್ಲಿ ತಲ್ಲೀನವಾಗಿತ್ತು. ಅದೇ ದಿನ ಸುರತ್ಕಲ್ ನಲ್ಲಿ ಸಮಯ ಸಾಧಿಸಿ ದುಷ್ಕರ್ಮಿಗಳು ಫಜಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಮುಖ್ಯವಾಗಿ ಮಸೂದ್, ಪ್ರವೀಣ್ ಹತ್ಯೆ ನಡೆದು ನಿಗಿನಿಗಿ ಕೆಂಡದಂತಿದ್ದ ಸಮಯದಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ಪೊಲೀಸ್ ವ್ಯವಸ್ಥೆ ಏಕೆ ಬಿಗಿಯಾಗಿರಲಿಲ್ಲ? ಇದು ನಿರ್ಲಕ್ಷ್ಯವಲ್ಲವೆ? ಅನ್ನುವುದನ್ನು ಪ್ರಶ್ನಿಸಬೇಕಿದೆ.
ಪೊಲೀಸ್ ಸಿಬ್ಬಂದಿ ಕೊರತೆ ದೇಶದ ಎಲ್ಲಾ ರಾಜ್ಯಗಳ ದೊಡ್ಡ ಸಮಸ್ಯೆ. ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಪೊಲೀಸರು ಇಲ್ಲದಿರುವುದೇ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾದ ಸುಮಾರು 1.08 ಲಕ್ಷ ಹುದ್ದೆಗಳ ಪೈಕಿ 88 ಸಾವಿರ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 23 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರ ಹಂತ ಹಂತವಾಗಿ ಸಿಬ್ಬಂದಿ ನೇಮಕಾತಿ ನಡೆಸುತ್ತಿದೆಯಾದರೂ ತ್ವರಿತ ನೇಮಕಾತಿಯ ಪ್ರಕ್ರಿಯೆ ವಿಳಂಬವಾಗುತ್ತಿದೆ.
2019 ರ ರಾಷ್ಟ್ರೀಯ ಮಾನದಂಡದ ಪ್ರಕಾರ, ದೇಶದ ಒಂದು ಲಕ್ಷ ಜನರಿಗೆ 198 ಪೊಲೀಸರಿರಬೇಕಾದ ಜಾಗದಲ್ಲಿ 158 ಪೊಲೀಸರಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷ ಜನರಿಗೆ 182 ಪೊಲೀಸರು ಇರಬೇಕು. ಆದರೆ, 139 ಸಿಬ್ಬಂದಿ ಮಾತ್ರ ಇದ್ದಾರೆ. ಗುಜರಾತ್ನಲ್ಲಿ 161ರ ಜಾಗದಲ್ಲಿ 131, ಹರಿಯಾಣದಲ್ಲಿ 226 ಮಂದಿ ಬದಲು 163 ಪೊಲೀಸರಿದ್ದಾರೆ. ಮಿಜೋರಾಂ 1,016 ಪೋಸ್ಟ್ಗೆ 771, ರಾಜಸ್ತಾನದಲ್ಲಿ 145 ಪೈಕಿ 128 ಹಾಗೂ ಪಶ್ಚಿಮ ಬಂಗಾಳದಲ್ಲಿ 158 ಸಿಬ್ಬಂದಿ ಮಂಜೂರಾದ ಹುದ್ದೆಗಳ ಪೈಕಿ ಕೇವಲ 100 ಜನರಿದ್ದಾರೆ. ಇದೇ ರೀತಿ ದೇಶದ ಬಹುತೇಕ ರಾಜ್ಯಗಳಲ್ಲಿ ಪೊಲೀಸ್ ಅನುಪಾತದಲ್ಲಿ ಏರಿಳಿತ ಇರುವುದನ್ನು ಕಾಣಬಹುದು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಪಿಯಾಗಿದ್ದ ಬಾಲಕೃಷ್ಣ ರಾವ್ ಅವರ ಅವಧಿಯಲ್ಲಿ ಗ್ರಾಮೀಣ, ನಗರ, ಮಹಾನಗರ ಮೂರು ಭಾಗಗಳಾಗಿ ವಿಂಗಡಿಸಿ ಯಾವ ಠಾಣೆಗಳಲ್ಲಿ ಎಷ್ಟು ಮಂದಿ ಪೊಲೀಸರಿರಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಕ ಮಾಡಬೇಕೆಂದು ಹೇಳಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಬಂಗಾರಪ್ಪ ಅನುಮೋದಿಸಿದ್ದರು. ಇವೆಲ್ಲ ಆಗಿ 24 ವರ್ಷ ಗತಿಸಿದರೂ ಸಿಬ್ಬಂದಿ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿಲ್ಲ. ಜನಸಂಖ್ಯೆ ಹೆಚ್ಚಳವಾದರೂ ಪೊಲೀಸ್ ಸಿಬ್ಬಂದಿ ನೇಮಕದಲ್ಲಿ ಹೆಚ್ಚಳವಾಗಿಲ್ಲ. ಇದನ್ನು ರಾಜ್ಯ ಸರಕಾರ ಪರಿಶೀಲನೆ ನಡೆಸಬೇಕು ನಿವೃತ ಡಿಜಿಪಿ ಶಂಕರ ಬಿದರಿ ಹೇಳುತ್ತಾರೆ.
ದೇಶದಲ್ಲಿ ಡಿಜಿಟಲೀಕರಣ ಹೆಚ್ಚಾಗುತ್ತಿರುವ ಪರಿಣಾಮ ಹಳ್ಳಿಗಳು ಪಟ್ಟಣಗಳಾಗುತ್ತಿವೆ. ಪಟ್ಟಣ ನಗರವಾಗಿ, ನಗರ ಮಹಾನಗರವಾಗಿ ಬದಲಾಗುತ್ತಿವೆ. ಹಳ್ಳಿಗಳಿಂದ ಮಹಾನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಬರುವವರ ಪ್ರಮಾಣ ಅಧಿಕವಾಗಿದೆ. ದಿನೇ ದಿನೆ ಆರ್ಥಿಕ, ಉದ್ಯಮ ಹಾಗೂ ಕೈಗಾರಿಕೆಗಳು ಹಿಗ್ಗಿಸಿಕೊಳ್ಳುತ್ತಿವೆ. ಕೃಷಿ ಪ್ರದೇಶಗಳು ವಸತಿ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ಇದೆಲ್ಲದರ ಬೆಳವಣಿಗೆಯಿಂದ ಪೊಲೀಸ್ ಠಾಣೆಗಳ ಮೇಲೆ ಒತ್ತಡ ಬೀಳುತ್ತಿದೆ. ಇನ್ನೊಂದೆಡೆ ಕೋಮುಗಲಭೆ ಹಾಗೂ ಭಯೋತ್ಪಾದನೆ ಕೃತ್ಯಗಳ ಜೊತೆಗೆ ಅಪರಾಧ ಜಗತ್ತಿನಲ್ಲಿ ಹೊಸ ಹೊಸ ರೀತಿಯಲ್ಲಿ ವಂಚನೆ, ಕೌಟುಂಬಿಕ ಕ್ರೌರ್ಯ, ಸೈಬರ್ ಕ್ರೈಂ, ಹೀಗೆ ನಿತ್ಯ ನೂತನ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹಲವು ಸವಾಲುಗಳ ನಡುವೆ ಪೊಲೀಸರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿದೆ.