ನ್ಯೂಸ್ ನಾಟೌಟ್ : ಹಿಂದೂ ನಾಯಕ ಪ್ರವೀಣ್ ಹತ್ಯೆಯಾಗಿ ವಾರಗಳಾಗಿಲ್ಲ. ಇನ್ನೂ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಕಳೆದ ೧೦ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಅಮಾಯಕರ ಹೆಣಗಳು ಉರುಳಿವೆ. ಈ ನಡುವೆ ಆರೋಪ ಪ್ರತ್ಯಾರೋಪಗಳು ಕೂಡ ಮುಗಿಲು ಮುಟ್ಟಿದೆ. ಒಂದು ಕಡೆ ಬಿಜೆಪಿಯವರನ್ನು ಕಾಂಗ್ರೆಸ್ ನವರು ಮತ್ತೊಂದು ಕಡೆ ಕಾಂಗ್ರೆಸ್ ನವರನ್ನು ಬಿಜೆಪಿಯವರು ಪರಸ್ಪರ ದೂರಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಪ್ರವೀಣ್ ಹತ್ಯೆಗೆ ಪೊಲೀಸರೇ ಸಹಕಾರ ನೀಡಿದ್ದಾರೆ ಅನ್ನುವಂತಹ ಪೋಸ್ಟ್ ವೊಂದು ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರವೀಣ್ ಹತ್ಯೆಯ ಹಿನ್ನೆಲೆಯಲ್ಲಿ ಬೆಳ್ಳಾರೆಯ ಪೊಲೀಸ್ ಪೇದೆಯೊಬ್ಬರ ಕೈವಾಡವಿದೆ ಎನ್ನುವ ಪೋಸ್ಟ್ ಇದಾಗಿದ್ದು ಭಾರಿ ಸಂಖ್ಯೆಯಲ್ಲಿ ಶೇರ್ ಆಗಿದೆ. ಘಟನೆ ನಡೆದ ದಿನ ಪೊಲೀಸ್ ಪೇದೆಗೆ ಮಾಹಿತಿ ಇತ್ತು ಎಂದು ಊರಿನವರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಅಲ್ಲದೆ ಹತ್ಯೆ ನಡೆದ ಜಾಗದ ಸಮೀಪ ಇದ್ದ ಶಾಪ್ ನ ಮಾಲೀಕರೊಬ್ಬರು ಅಂದು ಸಿಸಿಟಿವಿ ಆಫ್ ಮಾಡಿ ಯಾಕೆ ಬೇಗ ಹೋದ್ರು ಎನ್ನುವಂತಹ ಪ್ರಶ್ನೆಗಳನ್ನೂ ಎತ್ತಲಾಗಿದೆ. ಈ ಪೋಸ್ಟ್ ಯಾರು ಹಾಕಿದ್ದಾರೆ ಯಾಕೆ ಹಾಕಿದ್ದಾರೆ ಅನ್ನುವ ಮಾಹಿತಿ ಇಲ್ಲ. ಆದರೆ ಅದಾಗಲೇ ಈ ಪೋಸ್ಟ್ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದೆ. ಇದರ ಹಿಂದೆ ಸತ್ಯಾಸತ್ಯತೆ ಇದೆಯಾ? ಅನ್ನುವುದರ ಬಗ್ಗೆ ತನಿಖೆ ನಡೆಸಬೇಕು. ಇದು ಸುಳ್ಳು ಸುದ್ದಿ ಆಗಿದ್ದರೆ ಇಂತಹ ಪೋಸ್ಟ್ ಗಳನ್ನು ಪ್ರಕಟಿಸುವ ವ್ಯಕ್ತಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.