ನ್ಯೂಸ್ ನಾಟೌಟ್: ಮನೆಯೊಂದಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಸಹಾಯಕ್ಕೆಂದು ಹೋಗಿದ್ದ ವ್ಯಕ್ತಿ ಚಿನ್ನಾಭರಣ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬಂಧಿತನನ್ನು ಸ್ಥಳೀಯ ಬಾರ್ ಉದ್ಯೋಗಿ ಗುರುವಾಯನಕೆರೆ ನಿವಾಸಿ ಶಿವಪ್ರಸಾದ್ (38) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಮೇ.16 ರಂದು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ ಎಂಬಲ್ಲಿ ಆನಂದ ಮೂಲ್ಯ ಎಂಬವರ ಮನೆಗೆ ಬೆಂಕಿ ತಗುಲಿತ್ತು. ಸ್ಥಳೀಯರು ಬೆಂಕಿಯನ್ನು ನಂದಿಸಿದ್ದರು. ಮನೆಯಲ್ಲಿದ್ದ ಬಟ್ಟೆ ಬರೆ ಸುಟ್ಟು ಕರಕಲಾಗಿತ್ತು. ಆದರೆ ಕಪಾಟಿನಲ್ಲಿದ್ದ ಚಿನ್ನ ಇಟ್ಟ ಬಾಕ್ಸಿಗೆ ಹಾನಿಯಾಗಿರಲಿಲ್ಲ. ಈ ಬಗ್ಗೆ ಸಮಾಧಾನ ಹೊಂದಿದ್ದ ಮನೆಯವರು ಮೇ.30 ರಂದು ಎಲ್ಲಾ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ ಇಡುವಾಗ ಚಿನ್ನ ಇಡುವ ಬಾಕ್ಸ್ ನೊಳಗಿದ್ದ ವಿವಿಧ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣವು ಕಳವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಅಂದು ಬೆಂಕಿ ನಂದಿಸಿ ಅಪದ್ಭಾಂಧವರೆನಿಸಿದ್ದ ಮಂದಿಯನ್ನೇ ವಿಚಾರಣೆಗೆ ಒಳಪಡಿಸಿದಾಗ ಶಿವಪ್ರಸಾದ್ ತಾನು ಚಿನ್ನಾಭರಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲಾ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.