ಬೆಂಗಳೂರು: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬಿಜೆಪಿ ಪಾಳಯದಲ್ಲಿ ಭಾರಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಇನ್ನೇನು ಕೆಲವೇ ತಿಂಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಆಪ್ತ ಮೂಲಗಳು ನ್ಯೂಸ್ ನಾಟೌಟ್ ಕನ್ನಡ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಸಮರ್ಥ ನಾಯಕತ್ವದ ಅಗತ್ಯವಿದೆ, ಈ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಶೋಭಾ ಅವರೇ ಸೂಕ್ತ ಅಭ್ಯರ್ಥಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಶೋಭಾ ಇಂಧನ ಸಚಿವೆಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಅದರಲ್ಲೂ ಪವರ್ ಕಟ್ ತಡೆಯುವುದಕ್ಕೆ ಅವರು ಉತ್ತರ ಭಾರತದಿಂದ ಪವರ್ ಕಾರಿಡಾರ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ಎಲ್ಲ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡದ ಪವರ್ ಫುಲ್ ಲೇಡಿ ಶೋಭಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ನ್ಯೂಸ್ ನಾಟೌಟ್ ಗೆ ಮಾಹಿತಿ ಲಭ್ಯವಾಗಿದೆ.
ಶೋಭಾ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ಬಿಜೆಪಿ ರಾಜಾಧ್ಯಕ್ಷ ಸೀಟಿನಿಂದ ನಳೀನ್ ಕುಮಾರ್ ಕಟೀಲ್ ಕೆಳಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಒಂದೇ ಜಿಲ್ಲೆಯವರು ಮುಖ್ಯಮಂತ್ರಿ ಹಾಗೂ ರಾಜಾಧ್ಯಕ್ಷ ಹುದ್ಧೆಗಳಲ್ಲಿ ಇರುವುದಕ್ಕೆ ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಥವಾ ಉತ್ತರ ಕರ್ನಾಟಕದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಹೈ ಕಮಾಂಡ್ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅರವಿಂದ ಲಿಂಬಾವಳಿ ಹೆಸರು ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಮೊದಲನೆಯದಾಗಿ ಕೇಳಿ ಬಂದಿದೆ ಎನ್ನಲಾಗಿದೆ.
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ರಾಜ್ಯದ ವರಿಷ್ಠ ನಾಯಕರೊಂದಿಗೆ ಕೇಂದ್ರ ಪ್ರಮುಖ ನಾಯಕ ಸಂತೋಷ್ ಜಿ ಯವರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ. ಅಂತಿಮವಾಗಿ ಕೇಂದ್ರದಿಂದ ಅಧಿಕೃತ ಘೋಷಣೆ ಬೀಳುವ ನಿರೀಕ್ಷೆ ಇದೆ.