ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿಯನ್ನು ಬಂಧಿಸಲು ದೆಹಲಿ ಪೊಲೀಸರು ಜೈಪುರಕ್ಕೆ ಹೋಗಿದ್ದಾರೆ.
ಜೈಪುರ ಮೂಲದ 23 ವರ್ಷದ ಯುವತಿ ನೀಡಿದ ದೂರು ಆಧರಿಸಿ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ರೋಹಿತ್ ತಲೆ ಮರೆಸಿಕೊಂಡಿದ್ದಾರೆ. ‘ನಮ್ಮ ತಂಡ ಜೈಪುರವನ್ನು ತಲುಪಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಹುಡುಕಲಾಗುತ್ತಿದೆ. ಆತ ಅಡಗಿಕೊಂಡಿರುವ ಸ್ಥಳವನ್ನು ಪತ್ತೆ ಬಂಧಿಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವರ್ಷದಿಂದ ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಯುವತಿ ದೂರಿನಲ್ಲಿ ಹೇಳಿದ್ದಾರೆ. ಅಲ್ಲದೆ ಆಕೆ ಗರ್ಭಿಣಿಯಾಗಿದ್ದು ಮಗು ತೆಗೆಸುವುದಕ್ಕಾಗಿ ಆತ ಒತ್ತಾಯಿಸಿದ್ದಾನೆ ಎಂದು ಹೇಳಲಾಗಿದೆ.