ಮಂಗಳೂರು: ಸರಕಾರಿ ನಿಯಮ ಉಲ್ಲಂಘಿಸಿ ಸದ್ದಿಲ್ಲದೆ ವಿದೇಶ ಪ್ರವಾಸ ಮಾಡಿರುವ ಆರೋಪದಲ್ಲಿ ಸುಳ್ಯ ಮೂಲದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತುಗೊಂಡು ಸುದ್ದಿಯಾಗಿದ್ದಾರೆ.
ನಿನ್ನೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಮ್ಮದ್ ಶರೀಫ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮಾರ್ಚ್ 16 ರಂದು ವೈಯಕ್ತಿಕ ಕಾರಣಕ್ಕೆ ರಜೆ ಪಡೆದುಕೊಂಡಿದ್ದ ಅವರು ದುಬೈಗೆ ತೆರಳಿದ್ದರು ಎನ್ನಲಾಗಿದೆ. ಹೀಗೆ ತೆರಳುವುದಾದರೆ ಡಿಜಿಪಿ ಅವರ ಪೂರ್ವಾನುಮತಿ ಪಡೆಯಬೇಕು. ಆದರೆ ಅವರು ಹಾಗೆ ಮಾಡದೆ ಸರಕಾರಿ ನಿಯಮವನ್ನು ಉಲ್ಲಂಘಿಸಿರುವುದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.