ಕಲ್ಲುಗುಂಡಿ: ಇಲ್ಲಿನ ಚಟ್ಟೆಕಲ್ಲಿನ ನಿವಾಸಿ ಅರ್ಚಕ, ಜ್ಯೋತಿಷಿ ಅಂಬರೀಶ್ ಭಟ್ ಅವರ ಅಂಬಾಶ್ರಮ ನಿಲಯದಲ್ಲಿ ನಿನ್ನೆ ರಾತ್ರಿ ನಡೆದಿರುವ ಭಾರಿ ದೊಡ್ಡ ದರೋಡೆ ಪ್ರಕರಣವು ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಈಗ ಭಯಭೀತಗೊಳಿಸಿದೆ.
ಹೌದು, ಮನೆಗೆ ನುಗ್ಗಿದ ಮಚ್ಚು ಹಿಡಿದ ದರೋಡೆಕೋರರ ತಂಡ ಮೊದಲು ಹೊರಗಿನ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಕುಟುಂಬ ಮೂಲಗಳು ಹೇಳಿವೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅವರ ಪುತ್ರ ಶ್ರೀವತ್ಸ, ಎಳನೀರು ಕಡಿಯುವ ಮಚ್ಚು ತೋರಿಸಿ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿದ್ದಾರೆ. ಮನೆಯಲ್ಲಿದ್ದ ಮೊಬೈಲ್ ಫೋನ್ ಅನ್ನು ಮೊದಲು ಸ್ವಿಚ್ ಆಫ್ ಮಾಡಿದ ದರೋಡೆಕೋರರು ಹಳೆಯ ಲ್ಯಾಂಡ್ ಲೈನ್ ಫೋನ್ ಸಂಪರ್ಕವನ್ನು ನೆಲಕ್ಕೆ ಬಡಿದು ಪುಡಿಗೈದಿದ್ದಾರೆ. ನಂತರ ಕಳ್ಳರು ನಿಮಗೆ ಏನೂ ಪ್ರಾಣ ಹಾನಿ ಮಾಡುವುದಿಲ್ಲ. ಆದರೆ ನಿಮ್ಮ ಬಳಿಯಿರುವ ಚಿನ್ನ, ಹಣವನ್ನು ನೀಡಬೇಕು ಎಂದು ಮನೆಯ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರಾಣ ಭಯದಿಂದ ನನ್ನ ಅಮ್ಮ ಹಾಗೂ ನನ್ನ ಪತ್ನಿ ಬೀರುವಿನ ಕೀ ನೀಡಿದ್ದಾರೆ. ದರೋಡೆಕೋರರು ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ನಡೆಯುವ ವೇಳೆ ನಾವು ಮನೆಯಲ್ಲಿ ಇರಲಿಲ್ಲ ಎಂದು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಕಳ್ಳರು 100 ಗ್ರಾಂ.ಚಿನ್ನ, 1.50 ಲಕ್ಷ ರೂ. ನಗದನ್ನು ದೋಚಿದ್ದಾರೆ. ಈಗಾಗಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.