ಕಲ್ಲುಗುಂಡಿ: ಇಲ್ಲಿನ ಒತ್ತೆಕೋಲ ವೀಕ್ಷಣೆಗೆಂದು ಬಂದ ಯುವಕರ ತಂಡವೊಂದು ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ಬಸ್ ಸ್ಟ್ಯಾಂಡ್ನಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರು ಬಂದು ಅವರನ್ನು ಠಾಣೆಗೆ ಕರೆದೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಲ್ಲುಗುಂಡಿ ಒತ್ತೆಕೋಲಕ್ಕೆಂದು ಬಂದಿದ್ದ ಐದು ಮಂದಿ ಯುವಕರ ತಂಡ ಜಾತ್ರೆಯನ್ನು ಅಸ್ವಾದಿಸುವುದನ್ನು ಬಿಟ್ಟು ಎರಡು ಬೈಕ್ ಗಳಲ್ಲಿ ಕೈಪಡ್ಕಕ್ಕೆ ತಿರುವಿನಲ್ಲಿರುವ ಲಯನ್ಸ್ ಕ್ಲಬ್ ನಿರ್ಮಿಸಿರುವ ಸಾರ್ವಜನಿಕ ಬಸ್ ಸ್ಟ್ಯಾಂಡ್ ಗೆ ಬಂದಿದ್ದಾರೆ. ಮನಸೋ ಇಚ್ಛೆ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಒಂದು ಹಂತದಲ್ಲಿ ಯುವಕರು ಕೂಗಾಟ, ಕಿರುಚಾಟ ಜೋರಾಗಿತ್ತು. ಅದೇ ವೇಳೆ ನೈಟ್ ಪ್ಯಾಟ್ ರೋಲಿಂಗ್ ಪೊಲೀಸರ ತಂಡ ಅದೇ ದಾರಿಯಲ್ಲಿ ಬಂದುದರಿಂದ ಅವರ ಕೈಗೆ ಸಿಕ್ಕಿಬಿದ್ದರು. ಪೊಲೀಸರನ್ನು ಕಂಡಾಗ ಬಾಲ ಮುದುಡಿದ ಬೆಕ್ಕಿನಂತಾದ ಯುವಕರ ತಂಡ ಕೈಯಲ್ಲಿದ್ದ ಮದ್ಯಪಾನದ ಗ್ಲಾಸ್ ಗಳನ್ನು ಬಿಸಾಕಿ ಸಭ್ಯರಂತೆ ವರ್ತಿಸುವುದಕ್ಕೆ ಆರಂಭಿಸಿದರು. 18-20 ವರ್ಷದ ಯುವಕರ ವರ್ತನೆ ಕಂಡು ಪೊಲೀಸರ ಪಿತ್ತ ನೆತ್ತಿಗೇರಿತ್ತು. ಯುವಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿರುವುದಕ್ಕೆ ದಂಡ ಕಟ್ಟುವಂತೆ ಸೂಚಿಸಿದರು. ಕಾನೂನು ಮುರಿಯುವ ಇಂತಹ ಪುಂಡರಿಗೆ ಬುದ್ಧಿ ಕಲಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.