ಕಡಬ: ಮೊಬೈಲ್ ಬಳಸಿಕೊಂಡು ಕೆಲವು ಖದೀಮರು ಹೇಗೆ ಬೇಕಾದರೂ ಹಾಗೆ ಆಟ ಆಡಬಹುದು ಅಂತ ಅಂದುಕೊಂಡಿದ್ದಾರೆ. ಮತ್ತೊಬ್ಬರ ಹೆಸರಲ್ಲಿ ಸಂದೇಶ ಕಳಿಸುವುದು, ಅಪಪ್ರಚಾರ ನಡೆಸುವುದನ್ನೇ ಕೆಲವು ದುಷ್ಕರ್ಮಿಗಳು ಉದ್ಯೋಗವಾಗಿಸಿಕೊಂಡಿದ್ದಾರೆ. ಹೀಗೆ ಇಲ್ಲೊಬ್ಬ ಯುವಕ ಯುವತಿಯೊಬ್ಬಳಿಗೆ 15 ಮೊಬೈಲ್ ಗಳಿಂದ ಸಂದೇಶ ಕಳಿಸಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಮೊಬೈಲ್ ಕೊಟ್ಟ ಸ್ನೇಹಿತರು ಈಗ ಗಾಬರಿಯಿಂದ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಕೊಕ್ಕಡದ ಯುವಕ ಕಡಬದ ಯುವತಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಳಿಕ ಅವರಿಬ್ಬರ ನಡುವೆ ಮೈಮನಸು ಉಂಟಾಗಿ ಆತನ ಕರೆ ಮತ್ತು ಸಂದೇಶ ಬಾರದಂತೆ ಯುವತಿ ಬ್ಲಾಕ್ ಮಾಡಿದ್ದಳು. ಹೀಗಾಗಿ ಯುವಕ ಹೋದಲ್ಲೆಲ್ಲ ಸಿಗುವ ಸ್ನೇಹಿತರ ಬಳಿ “ತುರ್ತು ಕರೆ ಮಾಡಲು ಇದೆ” , ಪೋನ್ ಚಾರ್ಜ್ ಖಾಲಿಯಾಗಿದೆ, ಎಂದು ಸುಳ್ಳು ಹೇಳಿ ಅವರ ಮೊಬೈಲ್ ಪಡೆದು ಆಕೆಗೆ ಸಂದೇಶ ಮಾಡುತ್ತಿದ್ದ. ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದ. ಹೀಗೆ 15 ಕ್ಕೂ ಅಧಿಕ ತನ್ನ ಆಪ್ತರ ಪೋನ್ ಬಳಸಿ ಸಂದೇಶ ಮಾಡಿದ್ದಾನೆ, ಕಿರುಕುಳ ತಡೆಯಲಾಗದೆ ಯುವತಿ ಪೊಲೀಸ್ ದೂರು ನೀಡಿದ್ದಾಳೆ. ಎಲ್ಲ ಮೊಬೈಲ್ ಸಂಖ್ಯೆಯವರನ್ನು ಪೊಲೀಸ್ ಠಾಣೆಗೆ ಕರೆಯಿಸಿದಾಗ ಸತ್ಯ ಬಯಲಾಗಿದ್ದು ಯುವಕ ತನ್ನ ತಪ್ಪನ್ನು ಠಾಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.