ಈಶ್ವರ ಮಂಗಲ: ಮೈಸೂರಿನ ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ ಮಂಗಲದಲ್ಲಿ ಪೊಲೀಸರು ಸೋಮವಾರ ಸ್ಥಳ ಮಹಜರು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬರು ಎಸ್.ಐ, ಸಿಬ್ಬಂದಿ ಹಾಗೂ ಇಬ್ಬರು ಇಂಜೀನಿಯರ್ ಭಾಗಿಯಾಗಿದ್ದರು. ಜಗದೀಶರ ಹೆಣವನ್ನು ಹೂತು ಹಾಕಿದ ಜಾಗ ಮತ್ತು ಹೆಣವನ್ನು ಬಚ್ಚಿಟ್ಟ ಗೋಡನ್ ಗೂ ತೆರಳಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಸದ್ಯ ಪ್ರಕರಣದ ಆರೋಪಿಗಳಾದ ಸುಬ್ಬಯ್ಯ ಯಾನೆ ಬಾಲಕೃಷ್ಣ ರೈ, ಪತ್ನಿ ಜಯ ಲಕ್ಷ್ಮೀ, ಮಗ ಪ್ರಶಾಂತ್ , ನೆರೆಮನೆಯ ನಿವಾಸಿ ಪಟ್ಲಡ್ಕ ಸಂಜೀವ ಗೌಡರ ಪುತ್ರ ಜೀವನ್ ಪ್ರಸಾದ್ ಹಾಗೂ ಜಯರಾಜ್ ಶೆಟ್ಟಿ ಪೊಲೀಸರಿಂದ ಬಂಧಿಸಲ್ಪಟ್ಟು ಮಂಗಳೂರು ಜೈಲಿನಲ್ಲಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್ಐ ಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರು ಕೇಳಿ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದು ಕೊಲೆ ಸಂಚಿಗೆ ಯಾರಾದರೂ ಸಹಕಾರ ನೀಡಿದ್ದರೆ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಬ್ಬಯ್ಯ ಸಂಬಂಧದಲ್ಲಿ ಕೊಲೆಯಾದ ಜಗದೀಶ್ ಅವರಿಗೆ ಮಾವನಾಗಿದ್ದ. ಇವರನ್ನು ನಂಬಿ ದಕ್ಷಿಣ ಕನ್ನಡ ಜಿಲ್ಲೆಯ ಕುಂಜೂರು ಪಂಜದಲ್ಲಿ 65 ಲಕ್ಷ ರೂ.ವಿನ ಜಾಗವನ್ನು ಜಗದೀಶ್ ಖರೀದಿಸಿದ್ದರು. ಈ ಜಾಗದ ಉಸ್ತುವಾರಿಯನ್ನು ಸುಬ್ಬಯ್ಯನೇ ನೋಡಿಕೊಳ್ಳುತ್ತಿದ್ದ. ಜಾಗೆಯ ದಾಖಲೆಗಳನ್ನು ಜಗದೀಶ್ ಅವರು ಮಾವ ಅನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಬಿಟ್ಟಿದ್ದರಿಂದ ಸರಿಯಾಗಿ ರೆಕಾರ್ಡ್ ಮಾಡಿಸಿಕೊಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೈಸೂರಿನಲ್ಲಿದ್ದು ಅಪರೂಪಕ್ಕೊಮ್ಮೆ ಊರಿಗೆ ಬರುತ್ತಿದ್ದ ಜಗದೀಶ್ ಅವರ ಆಸ್ತಿಯನ್ನು ಸುಬ್ಬಯ್ಯ ಬೇರೊಬ್ಬರಿಗೆ 65 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಈ ವಿಷಯ ತಿಳಿದ ಬಳಿಕ ಜಗದೀಶ್ ಕೋಪಗೊಂಡಿದ್ದಾರೆ. ನೇರವಾಗಿ ಸುಬ್ಬಯ್ಯನನ್ನು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ನ.೧೮ರಂದು ಓಮ್ನಿ ಕಾರಿನೊಳಗೆ ಜಗದೀಶ್ ಅವರನ್ನು ಕೂರಿಸಿಕೊಂಡ ಸುಬ್ಬಯ್ಯ ಮತ್ತು ಗ್ಯಾಂಗ್ ಅಲ್ಲಿ ತಲೆಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಜಗದೀಶ್ ಸತ್ತ ಬಳಿಕ ಮೃತದೇಹವನ್ನು ಒಂದು ದಿನ ಪಟ್ಲಡ್ಕದಲ್ಲಿ ಶೆಡ್ ವೊಂದರ ಒಳಗೆ ಇರಿಸಿ ಮರುದಿನ ಆರೋಪಿಗಳು ಅದನ್ನು ನಿರ್ಜನ ಪ್ರದೇಶದಲ್ಲಿ ಹೂತ್ತಿದ್ದರು. ತಾನೇ ಕೊಂದಿದ್ದರೂ ಸುಬ್ಬಯ್ಯ, ಆತನ ಮಗ ಪ್ರಶಾಂತ್, ಜೀವನ್ ಪ್ರಸಾದ್ ತಾವೇನೂ ಮಾಡೇ ಇಲ್ಲದಂತೆ ಡ್ರಾಮಾ ಮಾಡಿದ್ದರು. ಆದರೆ ಪೊಲೀಸರು ಚಾಣಾಕ್ಷ ತನದಿಂದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.