ತಿರುವನಂತಪುರ: ಕೇರಳ ಸರ್ಕಾರ ಕಳೆದ ವಾರ ನಡೆಸಿದ್ದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆಯಲ್ಲಿ 104 ವರ್ಷ ವಯಸ್ಸಿನ ಕುಟ್ಟಿಯಮ್ಮ 100 ಅಂಕದಲ್ಲಿ 89 ಅಂಕವನ್ನು ಗಳಿಸಿದ್ದಾರೆ. ಇದೀಗ ಕುಟ್ಟಿಯಮ್ಮನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಯಾವ ಪರೀಕ್ಷೆ?
ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನ ಪರೀಕ್ಷಿಸಲು ನಡೆಸಿದ ಮಿಗವುಲ್ಸವಂ ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕುಟ್ಟಿಯಮ್ಮ 100 ಅಂಕಗಳಲ್ಲಿ 89 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಈ ಮೂಲಕ ನಾಲ್ಕನೇ ತರಗತಿಯ ಸಮಾನ ಸಾಕ್ಷರತಾ ಪರೀಕ್ಷೆಗೆ ಹಾಜರಾಗಲು ಅವರು ಅರ್ಹರಾಗಿದ್ದಾರೆ.
ಇನ್ನೂ ಕೇರಳ ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಕುಟ್ಟಿಯಮ್ಮ ಕುರಿತು ಮಾತನಾಡುತ್ತಾ, ಅಕ್ಷರ, ಪದ ಮತ್ತು ಜ್ಞಾನ ಜಗತ್ತಿಗೆ ಪ್ರವೇಶಿಸಲು ವ್ಯಕ್ತಿಯ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಕುಟ್ಟಿಯಮ್ಮ ತೋರಿಸಿಕೊಟ್ಟಿದ್ದಾರೆ. ಗುರಿಯನ್ನು ಸಾಧಿಸುವ ಮನಸ್ಸಿದ್ದರೆ ಸಾಕು, ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೆ ಎಂದು ಅವರು ಹೇಳಿದ್ದಾರೆ.