ಅರಂತೋಡು : ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ 102ನೇ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ಸಿರಿಸೌಧ ಸಭಾಂಗಣದಲ್ಲಿ ಜರುಗಿತು.
ಮೊದಲಿಗೆ ಸಾಲು ಸಾಲು ಹಬ್ಬಗಳ ಪ್ರಯುಕ್ತ ವಾಹನ ಸಾಲಮೇಳ-2021 ಅನ್ನು ಉದ್ಘಾಟಿಸಲಾಯಿತು. ಸಂಘದ ಸದಸ್ಯ ದಿನೇಶ್ ದೇರಾಜೆಯವರು ಪ್ರಾರ್ಥನೆ ನಡೆಸುವುದರೊಂದಿಗೆ ಮಹಾಸಭೆಯನ್ನು ಆರಂಭಿಸಲಾಯಿತು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು 2020-21ನೇ ಸಾಲಿನ ಮಹಾಸಭೆಗೆ ಆಗಮಿಸಿದ ಸಂಘದ ಸರ್ವ ಸದಸ್ಯರನ್ನು ಸ್ವಾಗತಿಸಿದರು. ವರದಿ ವರ್ಷದಲ್ಲಿ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರಾದ ವಾಸುದೇವ ನಾಯಕ್ರವರು 2020-21ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ, ಆರ್ಥಿಕ ವರ್ಷಾಂತ್ಯಕ್ಕೆ 2236 ಸದಸ್ಯರಿದ್ದು. ರೂ. 20.28ಕೋಟಿ ಠೇವಣಿ ಹೊಂದಿದ್ದು, ರೂ 26.24ಕೋಟಿ ಸಾಲ ಹೊರಬಾಕಿಯಿರುತ್ತದೆ. 112.38 ಕೋಟಿ ವ್ಯವಹಾರ ಮಾಡಿ, 41.57ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ. 33.66 ಲಾಭದೊಂದಿಗೆ ಮುನ್ನಡೆದಿದೆ ಎಂದರು. ನಂತರ ಅನುಪಾಲನಾ ವರದಿ, ಬಜೆಟ್ ಗಿಂತ ಹೆಚ್ಚಿಗೆ ಖರ್ಚಾಗಿರುವುದನ್ನು, 2021-22ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು, 2021-22ನೇ ಸಾಲಿನ ಕಾರ್ಯಚಟುವಟಿಕೆ, ಉಪವಿಧಿಗಳ ತಿದ್ದುಪಡಿಗಳನ್ನು ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡಕೊಳ್ಳಲಾಯಿತು. ಸಂಘದ ಸದಸ್ಯರಾದ ಕೆ.ಆರ್. ಪದ್ಮನಾಭರವರು ಮತ್ತು ಭವಾನಿಶಂಕರ ಅಡ್ತಲೆಯವರು ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಿದರು. ವೆಂಕಟ್ರಮಣ ಪೆತ್ತಾಜೆಯವರು ಸುಸ್ತಿ ಸಾಲಗಳ ವಸೂಲಾತಿ ಕುರಿತು ಮಾಹಿತಿಯನ್ನು ಕೇಳಿದರು. ಜನಾರ್ಧನ ಬಾಳಕಜೆಯವರು ಸಾಲಮನ್ನಾದ ಕುರಿತು ಮಾಹಿತಿಯನ್ನು ಕೇಳಿದರು.
ಸಂಘದ ಅಧ್ಯಕ್ಷರು ಮಾತನಾಡುತ್ತಾ, ಲಾಭಾಂಶ ವಿಂಗಡಣೆಯ ಬಗ್ಗೆ ವಿವರಣೆ ನೀಡಿ ಶೇ 5ರಷ್ಟು ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ ಸಭೆಗೆ ಎಂದು ತಿಳಿಸಿದರು. ಜೊತೆಗೆ ಸಮೃದ್ಧಿ ಮಾರ್ಟ್ ನಲ್ಲಿ ವ್ಯವಹಾರ ನಡೆಸುವ ಸದಸ್ಯರಿಗೆ ಶೇ 10ರಷ್ಟು ರಿಯಾಯಿತಿಯನ್ನು ನೀಡಲು ಸಂಘದ ಆಡಳಿತ ಮಂಡಳಿ ವತಿಯಿಂದ ಉದ್ದೇಶಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಶತಮಾನದ ಇತಿಹಾಸವಿರುವ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರಾಜ್ಯ ಮಟ್ಟದ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ. ಸಹಕಾರ ಕ್ಷೇತ್ರದ ಮೂಲಕ ರೈತರಿಗೆ, ಕೃಷಿಕರಿಗೆ ಆಧುನಿಕ ಬ್ಯಾಂಕಿಗ್ ಸೇವೆಯನ್ನು ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿರುವ ನಮ್ಮ ಸಂಘವು ಯಶಸ್ಸಿನ ಏರು ಪಥದಲ್ಲಿದೆ. ಮುಖ್ಯವಾಗಿ ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಉತ್ತಮ ತಂತ್ರಜ್ನಾನಗಳನ್ನು ಬಳಸಿಕೊಂಡು ರೈತಾಪಿ ವರ್ಗದ ಹಾಗು ಗ್ರಾಹಕರ ಸೇವೆಯಲ್ಲಿ ಸಂಘವು ಪ್ರಾಮಾಣಿಕವಾಗಿ ಕಾರ್ಯವೆಸಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಜನಸಾಮಾನ್ಯರೊಂದಿಗೆ ಬೆನ್ನೆಲುಬಾಗಿ ಸದಾ ಇರುವ ಸಂಸ್ಥೆಗಳಾಗಿ ಗುರುತಿಸಿಕೊಂಡು, ಕೃಷಿಕರ ಜೀವನದ ಅವಿಭಾಜ್ಯ ಅಂಗವಾಗಿರುವ ಸಹಕಾರ ಸಂಘಗಳು ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಾಜನುಖಿ ಚಟುವಟಿಕೆ ಮಾಡುವ ಮೂಲಕ ಸದಸ್ಯರ ದೈನಂದಿನ ಜೀವನದಲ್ಲಿ ಭಾಗಿಯಾಗಿ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ. 2020ರಲ್ಲಿ ಘೋಷಣೆಯಾದ ಲಾಕ್ಡೌನ್ ಸಂದರ್ಭ ಲಾಕ್ಡೌನ್ ಅಂದರೆ ಏನೆಂದು ಮತ್ತು ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದ ಕೃಷಿಕರಿಗೆ ಆಶಾಕಿರಣವಾಗಿ ಗೋಚರಿಸಿದ್ದು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಪ್ರತೀ ಹಂತದಲ್ಲಿಯೂ ಕೃಷಿಕರ ಬೆಂಗಾವಲಿಗೆ ಟೊಂಕಕಟ್ಟಿ ನಿಂತ ಸಂಘದ ಆಡಳಿತ ಮಂಡ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಈ ಸಂಕಷ್ಟದ ಸಂದರ್ಭದಲ್ಲಿ ಸದಸ್ಯರಿಗೆ ನೆರವಾಗುವ ಮುಖಾಂತರ ಸಹಕಾರಿ ತತ್ವವನ್ನು ಎತ್ತಿ ಹಿಡಿದು ಇತರೆ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ.
ರಾಜ್ಯದಲ್ಲಿಯೇ ಪ್ರಥಮವಾಗಿ ಸರಕಾರದ ಆದೇಶ ಜಾರಿಯಾಗುವ ಮುನ್ನವೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗುವ ದೃಷ್ಟಿಯಿಂದ ಸದಸ್ಯರ ಕೃಷಿಯೇತರ ಸಾಲಗಳ ಕಂತನ್ನು 2 ತಿಂಗಳ ಕಾಲ ಮುಂದೂಡಿ 36 ದಿನಗಳ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಇತರೆ ಹಣಕಾಸು ಸಂಸ್ಥೆಗಳಿಗೆ ಮಾದರಿಯಾಗಿತ್ತು.
ಮಾರುಕಟ್ಟೆಯಲ್ಲಿ ಕೃಷಿಕರಿಗೆ ದಲ್ಲಾಳಿಗಳಿಂದ ಉಂಟಾಗುತ್ತಿದ್ದ ದಬ್ಬಾಳಿಕ ಮತ್ತು ಸುಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಮೊತ್ತಮೊದಲನೆಯದಾಗಿ ಗೇರು ಬೀಜ ಖರೀದಿ ಪ್ರಾರಂಭಿಸಲಾಯಿತು. ಕಳೆದ ಲಾಕ್ಡೌನ್ನ ಸಂಕಷ್ಟದ ಸಂದರ್ಭದಲ್ಲಿ 1 ಕೆಜಿ ಗೇರುಬೀಜಕ್ಕೆ ಕೇವಲ ರೂ. 30ರ ದರದಲ್ಲಿ ಖರೀದಿಸಿ ಕೃಷಿಕರ ಮೇಲಿನ ದಬ್ಬಾಳಿಕೆ ಮತ್ತು ಸುಲಿಗೆಯನ್ನು ಮನಗಂಡ ಆಡಳಿತ ಮಂಡಳಿ ಅಡ್ಕಾರ್ ಗಣೇಶ್ ಕ್ಯಾಶ್ಯೂಸ್ರವರೊಂದಿಗೆ ತುರ್ತು ಮಾತುಕತೆಯನ್ನು ಮಾಡಿ ಸಂಘದ ವತಿಯಿಂದ ಗೇರುಬೀಜವನ್ನು ಕೆಜಿ ಒಂದಕ್ಕೆ ರೂ. 72ರದರದಲ್ಲಿ ಖರೀದಿ ಮಾಡಲಾಯಿತು. ಆ ಬಳಿಕ ಗೇರುಬೀಜ ಮಾರುಕಟ್ಟೆದರದಲ್ಲಿ ಏರಿಕೆ ಕಂಡು ಸುಮಾರು ರೂ. 93ರ ತನಕ ಏರಿತು. ಈ ರೀತಿಯಾಗಿ ಕೃಷಿಕರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಸುಲಿಗೆ ಮಾಡುವುದನ್ನು ತಪ್ಪಿಸಿ ಉತ್ತಮ ಧಾರಣೆಯನ್ನು ಒದಗಿಸಿ ಮಾದರಿಯಾದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ. ಮುಂದೆ ತಾಲೂಕಿನ ಹೆಚ್ಚಿನ ಎಲ್ಲಾ ಸಹಕಾರ ಸಂಘಗಳು ಗೇರು ಬೀಜ ಖರೀದಿಯನ್ನು ನಡೆಸಿದವು.
ಕ್ಯಾಂಪ್ಕೋ ವತಿಯಿಂದ ಶಾಖೆಗಳಲ್ಲಿ ಕೊಕ್ಕೋ ಖರೀದಿಯನ್ನು ನಿಲ್ಲಿಸಿದ್ದ ಸಂದರ್ಭದಲ್ಲಿ ಸಂಘವೇ ಕೊಕ್ಕೋ ಅನ್ನು ಬೆಳೆಗಾರರಿಂದ ನೇರವಾಗಿ ಖರೀದಿಸಿ ಕ್ಯಾಂಪ್ಕೋಗೆ ಮಾರಾಟ ಮಾಡುವುದರ ಮೂಲಕ ರೈತರಿಗೆ ನ್ಯಾಯಯುತ ಬೆಲೆಯನ್ನು ಒದಗಿಸಿಕೊಟ್ಟು, ಕೃಷಿ ಉತ್ಪನ್ನಗಳು ನಷ್ಟವಾಗದ ರೀತಿಯಲ್ಲಿ ನಿರ್ವಹಣೆ ಮಾಡಿ ಸದಸ್ಯರ ನೆರವಿಗೆ ಧಾವಿಸಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯವಾಗಿ ಮನೆಯಲ್ಲಿ ಉಳಿದುಕೊಂಡ ದಿನಗೂಲಿಯನ್ನು ನೆಚ್ಚಿಕೊಂಡಿದ್ದ ಬಡಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ನಿಗದಿಪಡಿಸಿ ವಿತರಿಸುತ್ತಿದ್ದ ಪಡಿತರದ ಅನಿವಾರ್ಯತೆಯಿತ್ತು. ಕೇಂದ್ರ ಸರಕಾರದ ಲಾಕ್ ಡೌನ್ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಣೆಯ ಸಂದರ್ಭದಲ್ಲಿನ ಉಂಟಾಗಬಹುದಾದ ಗುಂಪುಸೇರುವಿಕೆಯನ್ನು ಹಾಗು ಈ ಮೂಲಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಮತ್ತು ಸರಕಾರದ ಲಾಕ್ ಡೌನ್ ಉದ್ದೇಶವು ಯಶಸ್ವಿಯಾಗಿ ಪಾಲಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಹಿತದೃಷ್ಟಿಯಿಂದ ಸಂಘದ ಆಡಳಿತ ಮಂಡಳಿಯು ತುರ್ತು ಸಭೆ ಸೇರಿ ಮತ್ತು ಸಂಘದ ವ್ಯಾಪ್ತಿಯಲ್ಲಿನ ಪ್ರಮುಖರ ಸಭೆಯನ್ನು ಕರೆದು ಪಡಿತರವನ್ನು ಬೈಲುವಾರು ವಿತರಣೆಯ ತೀರ್ಮಾನವನ್ನು ಕೈಗೊಂಡಿತು
ಆರ್ಥಿಕ ಸಂಕಷ್ಟ ಸಂಘದ ಸದಸ್ಯರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆಯಾಗಬಾರದೆನ್ನುವ ದೆಸೆಯಲ್ಲಿ ಗೊಬ್ಬರ, ಕೃಷಿ ಮತ್ತು ರಬ್ಬರ್ ಉಪಕರಣಗಳ ಖರೀದಿಗೆ 45 ದಿನಗಳ ಕಾಲಮಿತಿಯ ಶೂನ್ಯ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗಿತ್ತು.
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತೀರಾ ಅವಶ್ಯವಿರುವ ಸುಮಾರು 75 ಅತ್ಯಂತ ಬಡ ಕುಟುಂಬಗಳಿಗೆ ಉಚಿತ ಆಹಾರ ಕಿಟ್ಗಳನ್ನು ವಿತರಣೆ ಮಾಡಲಾಗಿತ್ತು. ಸಂಘದ ವ್ಯಾಪ್ತಿಯ ಕೊರೊನ ಫ್ರಂಟ್ ಲೈನ್ ವಾರಿಯರ್ಗಳಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಲಾ ರೂ 2000.00 ಸಹಾಯಧನ ಮತ್ತು ಪಡಿತರ ಕಿಟ್ ಅನ್ನು ವಿತರಣೆಯನ್ನು ಮಾಡಲಾಗಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಸಂಘದ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದರೆ ಸಮೃದ್ಧಿ ಮಾರ್ಟ್. ಆರ್ಥಿಕ ಸಂಕಷ್ಟದ ಮಧ್ಯೆಯೂ ಕಳಪೆ ಗುಣಮಟ್ಟದ ವಸ್ತುಗಳಿಗೆ ಅತ್ಯಧಿಕ ದರವನ್ನು ವಿಧಿಸಿ ಹಗಲು ದರೋಡೆಯನ್ನು ಗಮನಿಸಿದ ಆಡಳಿತ ಮಂಡಳಿಯು ಸಂಘದ ವತಿಯಿಂದಲೇ ದಿನಸಿ ವಿಭಾಗವನ್ನು ತೆರೆಯುವ ಕುರಿತು ತೀರ್ಮಾನಿಸಿ, ಸಂಘದ ಮಾರಾಟ ವಿಭಾಗವನ್ನು ಆಧುನಿಕ ರೀತಿಯಲ್ಲಿ ವಿಸ್ತರಿಸಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಅರಂತೋಡು-ತೊಡಿಕಾನ ಗ್ರಾಮದ ಸದಸ್ಯರಿಗೆ ಮತ್ತು ಎಲ್ಲಾ ಸಾರ್ವಜನಿಕರಿಗೂ ನೆರವಾಗುವ ದೃಷ್ಟಿಯಿಂದ, ಉತ್ತಮ ಗುಣಮಟ್ಟದ ದಿನಸಿ ವಸ್ತುಗಳ ಸಹಿತ ಎಲ್ಲಾ ದೈನಂದಿನ ಅವಶ್ಯಕ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒಂದೇ ಮಳಿಗೆಯಡಿಯಲ್ಲಿ ಒದಗಿಸುವ ಉದ್ದೇಶದಿಂದ “ಸಮೃದ್ಧಿ ಮಾರ್ಟ್” ಎಂಬ ಸುಸಜ್ಜಿತ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಯಿತು. ಸಮೃದ್ಧಿ ಮಾರ್ಟ್ ಪ್ರಸ್ತುತ ಸಂಘದ ವ್ಯಾಪ್ತಿಯ ಮತ್ತು ನೆರೆಯ ಎಂಟು ಗ್ರಾಮಗಳ ಸಾವಿರಾರು ಸಂತೃಪ್ತ ಗ್ರಾಹಕರನ್ನು ಹೊಂದಿದ್ದು, ದೈನಂದಿನ ರೂ 1ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸುತ್ತಿದೆ. ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
2020-21ರ ಸಾಲಿನಲ್ಲಿ ಅತಿವೃಷ್ಟಿ ಪೀಡಿತ ಪಟ್ಟಿಯಿಂದ ಸುಳ್ಯ ತಾಲೂಕು ಕೈಬಿಟ್ಟಾಗ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಸಚಿವರುಗಳ ಗಮನವನ್ನು ಸೆಳೆದು ಸುಳ್ಯ ತಾಲೂಕನ್ನು ಅತಿವೃಷ್ಟಿ ಪೀಡಿತರ ಪಟ್ಟಿಗೆ ಸೇರಿಸುವಲ್ಲಿ ಸಂಘವು ಯಶಸ್ವೀಯಾಗಿದೆ. ಅಂತೆಯೇ ಈ ಬಾರಿಯೂ ಸರಕಾರದ ಗಮನವನ್ನು ಸೆಳೆದು ಅತಿವೃಷ್ಟಿಪೀಡಿತ ತಾಲೂಕುಗಳ ಪಟ್ಟಿಗೆ ಸುಳ್ಯ ತಾಲೂಕನ್ನು ಸೇರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ಸದಸ್ಯ ಶಶಿಕುಮಾರ ಅಡ್ತಲೆ ವಿನಂತಿಸಿದರು. ಅರಂತೋಡು-ತೊಡಿಕಾನ ಗ್ರಾಮದಲ್ಲಿನ ಆನೆಗಳ ಹಾವಳಿ ತಡೆಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸುವ ಕುರಿತು ವೆಂಕಟ್ರಮಣ ಪೆತ್ತಾಜೆಯವರು ಮನವಿ ಮಾಡಿದರು.
ಬಜೆಟ್ಟಿಗಿಂತ ಹೆಚ್ಚಿಗೆ ಖರ್ಚಾದ ಮೊಬಲಗಿಗೆ ಸಂಘದ ಮಹಾಸಭೆಯ ಅನುಮೋದನೆಯನ್ನು ಪಡಕೊಂಡು ಬಳಿಕ 2021-22ನೇ ಸಾಲಿನ ಆಯ-ವ್ಯಯ ಪಟ್ಟಿಗೆ ಅನುಮೋದನೆ ನಿಡಲಾಯಿತು.
ಠರಾವು ಮುಖಾಂತರ ಸಂಘದ ಹಿಂದಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ತೀರ್ಥರಾಮ ಬಿ.ಕೆ.ಯವರ ಅವಧಿಯ ದಾವೆಯ ಪ್ರಕರಣಗಳನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಲಯದ ತೀರ್ಮಾನದಂತೆ ಮುಕ್ತಾಯಗೊಳಿಸಲು ಸಂಘದ ಆಡಳಿತ ಮಂಡಳಿಗೆ ಅಧಿಕಾರ ನೀಡುವ ಮತ್ತು ಮಾರಾಟ ವಿಭಾಗದಲ್ಲಿನ ಅವ್ಯವಹಾರದ ಬಾಬ್ತು ಮೊಬಲಗನ್ನು ಪಾವತಿಸಲು ಅಪ್ಪಕುಂಇï ಕೆ. ರವರು ಮಾಡಿದ್ದ ಸಾಲದ ಮೇಲಿನ ಬಡ್ಡಿ ಮೊಬಲಗನ್ನು ಮನ್ನಾ ಮಾಡುವಂತೆ ಸಲ್ಲಿಸಿದ್ದ ಮನವಿಯನ್ನು ಮಹಾಸಭೆಯು ಒಪ್ಪಿಗೆ ಸೂಚಿಸುವ ಮೂಲಕ ಆಡಳಿತ ಮಂಡಳಿಗೆ ಅಧಿಕಾರ ನೀಡುವ ಮೂಲಕ 8 ವರ್ಷಗಳ ಸುದೀರ್ಘ ಪ್ರಕರಣಗಳಿಗೆ ಮಹಾಸಭೆ ತೀರ್ಮಾನದಂತೆ ತಾರ್ಕಿಕ ಅಂತ್ಯ ಹಾಡಲಾಯಿತು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಲು ಅವಕಾಶವಿಲ್ಲದಿದ್ದಾಗ ಅಂತಹ ಕೋವಿಡ್ನಿಂದ ಮೃತಪಟ್ಟ 35 ಮೃತದೇಹಗಳನ್ನು ತಮ್ಮ ಜೀವವನ್ನು ಪಣಕಿಟ್ಟು ಶಾಸ್ತೊಕ್ತವಾದ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಿದ ವಿಶ್ವಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಇದರ ಕಾರ್ಯಕರ್ತರಾದ ನವೀನ್ ಎಲಿಮಲೆ, ಸನತ್ ಚೊಕ್ಕಾಡಿ. ಲತೀಷ್ ಗುಂಡ್ಯ, ಕಿರಣ್ ಜಟ್ಟಿಪಳ್ಳ, ಪ್ರಕಾಶ್ ಯಾದವ್, ನವೀನ್ ಸುಳ್ಯ, ಸಾಜನ್ ಕಾಯರ್ತೋಡಿ, ವಿಘ್ನೇಶ್ ರವರಿಗೆ ಮತ್ತು ಕಾಲುಜಾರಿ ಅಥವಾ ಆತ್ಮಹತ್ಯೆಯಂತಹ ಸಂದರ್ಭಗಳಲ್ಲಿ ನೀರಿಗೆ ಬಿದ್ದು ಮೃತಪಟ್ಟವರ ದೇಹಗಳು ಸಿಗದೇ ಇದ್ದಂತಹ ಸಮಯದಲ್ಲಿ ತಮ್ಮ ಜೀವಗಳನ್ನೇ ಪಣಕಿಟ್ಟು ನೀರಿನ ಆಳಕ್ಕಿಳಿದು ಹುಡುಕಾಡಿ ಮೃತದೇಹಗಳನ್ನು ಅಂತಿಮ ಸಂಸ್ಕಾರವನ್ನು ಕಲ್ಪಿಸಲು ಶ್ರಮಿಸುತ್ತಿರುವ ಮುಳುಗುತಜ್ಞರುಗಳಾದ ಅಸ್ತ್ರ ಪೈಚಾರ್ ಇದರ ಕಾರ್ಯಕರ್ತರಾದ ಮಹಮ್ಮದ್ ಬಶೀರ್ ಆರ್. ಬಿ. ಶಾಂತಿನಗರ, ಶರೀಫ್ ಟಿ.ಎ. ಪೈಚಾರ್, ಅಬ್ಬಾಸ್ ಶಾಂತಿನಗರ, ಲತೀಫ್ ಬಿ.ಎಲ್. ಬೊಳುಬೈಲು, ಶಿಯಾಬುದ್ದೀನ್ ಕೆ.ಎ. ಬೆಟ್ಟಂಪಾಡಿ ರವರಿಗೆ ಬೆಂಗಳೂರಿನಲ್ಲಿ ನಡೆದ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಇವರು ಆಯೋಜಿಸಿದ ರಾಷ್ಟಮಟ್ಟದ ಮುಕ್ತ 12ಗಂಟೆಗಳ ಸ್ಟೇಡಿಯಂ ರಿಲೇ ಓಟ ಸ್ಪರ್ಧೆಯಲ್ಲಿ ತನ್ನ ವೈಯುಕ್ತಿಕ 2 ಗಂಟೆಗಳನ್ನು ಪೂರ್ಣಗೊಳಿಸಿ ತಂಡವು ರಾಷ್ಟ್ರಿಯ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯುವಲ್ಲಿ ಕಾರಣೀಕರ್ತರಾದ ಕು. ಸುಶ್ಮಿತಾ ಎಮ್.ಎ. ಬೆದ್ರುಪಣೆ, ಪ್ಯಾರಿಸ್ನ ಅಂತರಾಷ್ಟಿಯ ನೃತ್ಯ ಮಂಡಳಿಯ ಸದಸ್ಯ ಅಖಿಲ ನಟರಾಜಂ ಅಂತರ್ ಸಂಸ್ಕ್ರತಿ ಸಂಘ ನಾಗ್ಪುರ ಇದರ ವತಿಯಿಂದ ನಡೆದ ಭರತ ನಾಟ್ಯಂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತೊಡಿಕಾನ ಗ್ರಾಮದ ಧನ್ಯ ಮಯ್ಯ ಇವರಿಗೆ ಇವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಸರಕಾರಕ್ಕೆ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ| ರಾಜೇಂದ್ರ ಕುಮಾರ್ ಮತ್ತು ಆಡಳಿತಮಂಡಳಿಗೆ, ಎಲ್ಲಾ ಜನಪ್ರತಿನಿಧಿಗಳಿಗೆ, ಸಂಘದ ಸೂಕ್ತ ಕಾರ್ಯನಿರ್ವಹಣೆಗೆ ಸಲಹೆ ಸೂಚನೆ ನೀಡಿದ ನಬಾರ್ಡ್ ಸಂಸ್ಥೆ, ಸಹಕಾರ ಸಂಘಗಳ ಉಪನಿಬಂಧಕರು, ಉಪನಿರ್ದೇಶಕರು ಲೆಕ್ಕಪರಿಶೋಧನಾ ಇಲಾಖೆ, ಸಹಾಯಕ ನಿಬಂಧಕರು ಸಹಕಾರ ಇಲಾಖ ಅಧಿಕಾರಿಗಳಿಗೆ, ಸಂಘದ ಗೌರಾವಾನ್ವಿತ ಸದಸ್ಯರುಗಳಿಗೆ, ನವೋದಯ ಸ್ವಸಹಾಯ ಸಂಘಗಳಿಗೆ, ಆಂತರಿಕ ಲೆಕ್ಕಪರಿಶೋಧಕರಿಗೆ, ಲೆಕ್ಕಪರಿಶೋಧಕರಿಗೆ, ಸಂಘದ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಪತ್ರಿಕಾ ಮಾಧ್ಯಮದವರನ್ನು, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಉಪಾಧ್ಯಕ್ಷರಾದ ಶ್ರಿ ದಯಾನಂದ ಕುರುಂಜಿ ಎಲ್ಲಾ ನಿರ್ದೇಶಕ ಮಿತ್ರರಿಗೆ ಕೃತಜ್ನತೆಗಳನ್ನು ಸಲ್ಲಿಸಿದರು. ಹಾಗು ಸಂಘದ ಸಿಬ್ಬಂದಿ ವರ್ಗದ ಪ್ರಾಮಾಣಿಕ ದಕ್ಷ ಕರ್ತವ್ಯಕ್ಕಾಗಿ ಅವರನ್ನು ಅಭಿನಂದಿಸಿದರು.
ಸಭೆಯಲ್ಲಿ ರೈತರಿಂದ ಪ್ರಸ್ತಾಪವಾದ ಸಾಲ ಆಗದಿರುವ ರೈತರಿಗೆ ಸಾಲ ಮನ್ನಾ ಮಾಡುವಂತೆ, ಆನೆ ಹಾವಳಿಯಿಂದ ಕ್ರಷಿ ನಷ್ಟ,ಬರ ಮುಂತಾದ ಪ್ರಮುಖ ವಿಷಯದ ಬಗ್ಗೆ ಸರಕಾರಕ್ಕೆ ಬರೆಯುವಂತೆ ನಿರ್ಣಾಯಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ವಿನೋದ್ ಕುಮಾರ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ಸಂತೋಷ್ ಚಿಟ್ಟನ್ನೂರು, ಭಾರತಿ ಪಿಂಡಿಮನೆ, ಚಿತ್ರಾ ದೇರಾಜೆ, ಸೋಮಯ್ಯ ಹೆಚ್., ಗಣೇಶ್ ಕರಿಂಬಿ, ವಿಜೇತ್ ಮರುವಳ ಮತ್ತು ಕೇಶವ ಅಡ್ತಲೆ ಉಪಸ್ಥಿತರಿದ್ದರು. ಪರಿಣತ ನಿರ್ದೇಶಕರಾದ ಕೇಶವ ಅಡ್ತಲೆ ವಂದಿಸಿದರು.