ಮಂಗಳೂರು: ತುಳು ನಾಡಿನ ಜನತೆ ಆಚರಿಸುವ ಮಹತ್ವದ ದಿನ ಆಟಿ ಅಮಾವಾಸ್ಯೆ ಬಂದೇ ಬಿಟ್ಟಿದೆ. ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯೋದಿಲ್ಲ. ಈ ತಿಂಗಳನ್ನು ಕನ್ನಡದಲ್ಲಿ ಆಷಾಡ ಮಾಸ ಎಂದು ಕರೆಯಲಾಗುತ್ತಿದ್ದು, ಭಾರತೀಯ ಸಂಪ್ರದಾಯದಲ್ಲಿ ಯೂ ಆಷಾಢದ ಅಮಾವಾಸ್ಯೆಗೆ ಅದರದ್ದೇ ಆದ ಮಹತ್ವವಿದೆ.
ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕರೆಯುತ್ತಾರೆ. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಆಗಿದೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ. ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನದಂದು ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಹಿನ್ನೆಲೆ ಏನು?
ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು ಭೀಮನ ಅಮಾವಾಸ್ಯೆ ದಿನ. ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ್ಯ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ಪೂಜೆ ಸಲ್ಲಿಸುತ್ತಾರೆ.ಈ ದಿನದಂದು ಜನರು ಹಾಲೆಯ ಮರದ ಕೆತ್ತೆಯ ಕಷಾಯ ಕುಡಿಯುತ್ತಾರೆ. ಇದರಿಂದ ಸರ್ವ ರೋಗ ರುಜಿನೆಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ತುಳುನಾಡಿನಾದ್ಯಂತ ಇದೆ.