ನ್ಯೂಸ್ ನಾಟೌಟ್: “ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರ ಭ್ರಮೆಯಿಂದ ಹೊರಗೆ ಬರಬೇಕು, ಅಪ್ಪ-ಮಗ ಇಬ್ಬರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿಸಿದ್ದಾರೆ. ನಾನು ಹೊಸದಿಲ್ಲಿಗೆ ಹೋಗುವುದಿಲ್ಲ, ಉಚ್ಚಾಟನೆ ನಿರ್ಧಾರ ಮರುಪರಿಶೀಲನೆ ಮಾಡಲು ಒತ್ತಾಯವನ್ನೂ ಮಾಡುವುದಿಲ್ಲ” ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ(ಮಾ.29) ಮಾತನಾಡಿದ ಯತ್ನಾಳ್, “ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಯಾವ ವೀರಶೈವ-ಲಿಂಗಾಯತರು ಇಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಭ್ರಮೆಯಿಂದ ಹೊರಗೆ ಬರಬೇಕು. ತಂದೆ-ಮಗನಿಗೆ ಯಾವುದೇ ಶಕ್ತಿಯೂ ಇಲ್ಲ” ಎಂದು ಟೀಕಿಸಿದರು.
‘ರಾಮಾಯಣ, ಮಹಾಭಾರತದಲ್ಲಿ ಅಪಮಾನ ಮಾಡಿರುವ ಘಟನಾವಳಿಗಳಿವೆ. ಹೀಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್‍ವೈ ಕುಟುಂಬವನ್ನು ಹೊರಗೆ ಇಡುವವರೆಗೂ ನಾನು ಬಿಡುವುದಿಲ್ಲ. ಮುಂದೆ ಏನಾಗುತ್ತದೆ ಕಾದುನೋಡಿ. ನನ್ನ ಉಚ್ಛಾಟನೆಗೆ ಕಾರಣಕರ್ತರಾದವರು ನಾಶವಾಗುತ್ತಾರೆ’ ಎಂದು ಯತ್ನಾಳ್ ಭವಿಷ್ಯ ನುಡಿದರು.
ನಾನು ಹಿಂದೂಗಳ ಪರವಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿಯನ್ನು ತೊರೆಯುವುದಿಲ್ಲ. ರಾಜ್ಯಾದ್ಯಂತ ಸುತ್ತಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡುತ್ತಿದ್ದಾರೆ ಎಂದ ಯತ್ನಾಳ್, ಸನಾತನ ಹಿಂದೂ ಧರ್ಮದಿಂದ ಹಳಿ ತಪ್ಪಿರುವ ಪಕ್ಷವನ್ನು ಪುನಃ ಟ್ರ್ಯಾಕ್ ಮೇಲೆ ತರುವ ಕೆಲಸ ಮಾಡುತ್ತೇನೆಯೇ ಹೊರತು, ಯಾವತ್ತೂ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಕೈಹಾಕುವುದಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ನಾನು ಬಾಡಿಗೆ ಜನ ತಂದಿಲ್ಲ: ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತುಪಡಿಸಿ ಎಲ್ಲ ಸಂಸದರೂ ನಮ್ಮ ಪರ ಇದ್ದಾರೆ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸುವ ಯೋಗ್ಯತೆ ಇಲ್ಲ. ಆದರೆ, ನಾನು ಬಾಡಿಗೆ ಜನ ತಂದಿಲ್ಲ. ನಿನ್ನೆ ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.