ನ್ಯೂಸ್ ನಾಟೌಟ್ : ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರು ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಸಿನಿಮಾ ಗಳಿಕೆಯಲ್ಲಿ ಬಾರಿ ಹಿಂದೆ ಬಿದ್ದಿದೆ. 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬಂದಿತ್ತು. ನಿಧಾನವಾಗಿ ಶೋಗಳ ಸಂಖ್ಯೆ ತಗ್ಗಿಸುವಂತಾಗಿದೆ. ಇದು ಸಹಜವಾಗಿಯೇ ಸಿನಿಮಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಕೊತ್ತಲವಾಡಿ’ ಚಿತ್ರಕ್ಕೆ ಶ್ರೀರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವ ನಾಯಕ- ನಾಯಕಿಯಾಗಿ ಮಿಂಚಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ದೊಡ್ಡದಾಗಿ ಚಿತ್ರಕ್ಕೆ ಪ್ರಚಾರ ಸಹ ಮಾಡಲಾಗಿತ್ತು. ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ವೀಕೆಂಡ್‌ನಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಕೊತ್ತಲವಾಡಿ’ ಎಂಬ ಊರಿನಲ್ಲಿ ಮರಳು ಗಣಿಗಾರಿಕೆ ಸುತ್ತಾ ಸುತ್ತುವ ಕಥೆ ಚಿತ್ರದಲ್ಲಿದೆ. ಹಳ್ಳಿ ಸೊಗಡಿನ ಚಿತ್ರದಲ್ಲಿ ಎಲ್ಲವೂ ಒಳ್ಳೆ ಪರ್ಫಾರ್ಮನ್ಸ್ ನೀಡಿದ್ದಾರೆ. ಅನಾಥ ಯುವಕ ಮೋಹನನಾಗಿ ಪೃಥ್ವಿ ಅಂಬರ್ ಮಿಂಚಿದ್ದಾರೆ. ಗುಜರಿ ಬಾಬು ಆಗಿ ಮೋಹನನ ಜೀವನಕ್ಕೆ ದೊಡ್ಡ ತಿರುವು ಕೊಡುವ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಸಾಂಗ್ಸ್, ಟ್ರೈಲರ್‌ನಿಂದ ಸಿನಿಮಾ ಸದ್ದು ಮಾಡಿದರೂ ‘ಸು ಫ್ರಂ ಸೋ’ ಆರ್ಭಟ ನಡುವೆ ಎಲ್ಲವೂ ಮೌನವಾಗಿದೆ.
ಫಸ್ಟ್ ವೀಕೆಂಡ್ ಕಲೆಕ್ಷನ್ ‘ಕೊತ್ತಲವಾಡಿ’ ಚಿತ್ರತಂಡ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿಲ್ಲ. Sacnilk ವೆಬ್‌ಸೈಟ್ ವರದಿ ಪ್ರಕಾರ ಸಿನಿಮಾ ಮೊದಲ 3 ದಿನಕ್ಕೆ 12 ಲಕ್ಷ ರೂ. ಮಾತ್ರ ಗಳಿಸಿದೆ. ಶುಕ್ರವಾರ 3 ಲಕ್ಷ ರೂ. ಶನಿವಾರ 5 ಲಕ್ಷ ರೂ. ಹಾಗೂ ಭಾನುವಾರ 4 ಲಕ್ಷ ರೂ. ಮಾತ್ರ ಕಲೆ ಹಾಕಿದೆ. ಕಥೆ, ಹಿನ್ನೆಲೆ ಎಲ್ಲವೂ ಚೆನ್ನಾಗಿದೆ. ಆದರೆ ಭಾರೀ ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಸಿನಿಮಾ ನಿರಾಸೆ ಮಾಡಿದೆ. ಅದೇ ಈಗ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ