ನ್ಯೂಸ್ ನಾಟೌಟ್: ಐಟಿ ಮತ್ತು ಬಿಪಿಒ ಸೆಕ್ಟರ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸದ ಅವಧಿಯನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರ ಮಾಡುತ್ತಿರುವ ನಿಯಮ ಬದಲಾವಣೆಯ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಏರಿಸಲು ಮತ್ತು ದಿನದ ಗರಿಷ್ಠ ಕೆಲಸದ ಅವಧಿಯನ್ನು 9ರಿಂದ 12 ಗಂಟೆಗೆ ಏರಿಸಲು ಸರ್ಕಾರ ಪ್ರಸ್ತಾಪ ಮಾಡಿದೆ. ಈ ಸಂಬಂಧ 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ (Karnataka Shops and Commercial Establishments Act, 1961) ಕರಡು ತಿದ್ದುಪಡಿ ತಂದಿದೆ.
ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಇದರಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
1961 ರ ಆ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಎನ್ನುವ ನಿಯಮ ಇದೆ. ಓವರ್ ಟೈಮ್ ಕೂಡ ಸೇರಿ ಇದನ್ನು 12 ಗಂಟೆಗೆ ವಿಸ್ತರಿಸುವ ಪ್ರಸ್ತಾಪ ಇದೆ. ಓವರ್ ಟೈಮ್ ಅವಧಿ ಮೂರು ತಿಂಗಳಲ್ಲಿ 50 ಗಂಟೆಗೆ ಮಿತಿಗೊಳಿಸಲಾಗಿತ್ತು. ಅದನ್ನು 144 ಗಂಟೆಗೆ ಏರಿಸಲು ಸರ್ಕಾರ ಯೋಜಿಸಿದೆ.
ಕರ್ನಾಟಕ ಸರ್ಕಾರದ ಈ ಕಾರ್ಮಿಕ ಕಾನೂನು ತಿದ್ದುಪಡಿ ಪ್ರಸ್ತಾಪವನ್ನು ಐಟಿ ಉದ್ಯೋಗಿಗಳ ಒಕ್ಕೂಟವಾದ ಕೆಐಟಿಯು ಬಲವಾಗಿ ವಿರೋಧಿಸಿದೆ. ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆಗೊಂಡರೆ ದಿನದಲ್ಲಿ ಇರುವ ಮೂರು ಶಿಫ್ಟ್ ಗಳ ಸಂಖ್ಯೆ ಎರಡಕ್ಕೆ ಇಳಿಯಬಹುದು. ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳಬಹುದು ಎಂದು ಕೆಐಟಿಯು ಆತಂಕ ವ್ಯಕ್ತಪಡಿಸಿದೆ.
ಕಾರ್ಪೊರೇಟ್ ಸೆಕ್ಟರ್ನಲ್ಲಿರುವ 25 ವರ್ಷದೊಳಗಿನ ವಯಸ್ಸಿನ ಶೇ. 90ರಷ್ಟು ಉದ್ಯೋಗಿಗಳು ದೀರ್ಘ ಕೆಲಸದ ಅವಧಿಯಿಂದಾಗಿ ಆತಂಕದ ಮನಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಕಾರ್ಮಿಕ ಇಲಾಖೆ ನಡೆಸಿದ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಕೂಡ ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.
ಇನ್ನು ಮುಂದೆ ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ.? ವಾರದಲ್ಲಿ ಇನ್ನು ಕೇವಲ 5 ದಿನ ಕೆಲಸ..!