ನ್ಯೂಸ್ ನಾಟೌಟ್: ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.
ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ.
ಈಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ.
ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚಾ ಹಂತದಲ್ಲಿದ್ದು ಈ ಸಂಬಂಧ ರಾಜ್ಯ ಸರ್ಕಾರ ವಿಕಾಸ ಸೌಧದಲ್ಲಿ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳು ಸದಸ್ಯರು ಭಾಗಿಯಾಗಿದ್ದಾರೆ.
ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಸಂಘದಿಂದಲೂ ಪ್ರಸ್ತಾವನೆ ಬಂದಿದೆ. ನಿತ್ಯ 10 ಗಂಟೆ ಕೆಲಸ ಮಾಡಿದರೆ ಶನಿವಾರ ಭಾನುವಾರ ಎರಡು ದಿನದ ರಜೆ ನೀಡಲಾಗುತ್ತದೆ.
ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಕೆಲ ದಿನಗಳ ಹಿಂದೆ ನಡೆಸಿದ ಸಂಪುಟ ಸಭೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿತ್ತು.