ನ್ಯೂಸ್ ನಾಟೌಟ್: 55 ವರ್ಷದ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕನೊಬ್ಬ ಆಕೆಯ ಪತಿಯನ್ನು ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರಿನ ಕಡೂರು ಪಟ್ಟಣದ ಕಂಸಾಗರ ಎಂಬಲ್ಲಿ ನಡೆದಿದೆ.
ಮೃತದೇಹ ಸಿಕ್ಕಿದ್ದ ಬಳಿಕ ಜಾಡು ಹಿಡಿದ ಪೊಲೀಸರಿಗೆ ಅನೈತಿಕ ಸಂಬಂಧದ ಕಾರಣಕ್ಕೆ ಕೊಲೆಯಾಗಿರುವುದು ತಿಳಿದುಬಂದಿದೆ. ಸದ್ಯ ಯುವಕ ಸೇರಿದಂತೆ ಶವವನ್ನು ಸುಟ್ಟು ಪರಾರಿಯಾಗಿದ್ದ ಮೂವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಕಡೂರು ಪಟ್ಟಣದ ಕಂಸಾಗರ ಗೇಟ್ ಬಳಿ ಜೂನ್ 2 ರಂದು ಸಂಪೂರ್ಣ ಸುಟ್ಟು ಹೋಗಿ ಅಸ್ಥಿಪಂಜರದಂತಾಗಿದ್ದ ಶವ ಒಂದು ಪತ್ತೆಯಾಗಿತ್ತು. ಇದಕ್ಕೂ ಮುನ್ನ ನಾಪತ್ತೆ ಪ್ರಕರಣವೊಂದು ಕಡೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರ ಜಾಡು ಹಿಡಿದ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ.
ಕಡೂರು ಪಟ್ಟಣದ ಕೋಟೆ ನಿವಾಸಿ ಸುಬ್ರಹ್ಮಣ್ಯ (60) ಎಂಬವರೇ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಡೂರು ಪಟ್ಟಣದ ಕೋಟೆ ಬಡಾವಣೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಸುಬ್ರಹ್ಮಣ್ಯ ಎಂಬವರ ಪತ್ನಿ ಜತೆ ಕೋಟೆ ಬಡಾವಣೆಯ ಪ್ರದೀಪ್ (33 ವರ್ಷ) ಎಂಬಾತನಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಪ್ರದೀಪ್ ಎಂಬಾತ ಸುಬ್ರಹ್ಮಣ್ಯ ಎಂಬವರ ಮನೆಯ ನಿರ್ಮಾಣದ ಕಾಂಟ್ರಾಕ್ಟ್ ತೆಗೆದುಕೊಂಡಿದ್ದ ಎಂದು ಗೊತ್ತಾಗಿದೆ. ಇದೇ ನೆಪದಲ್ಲಿ, ಮನೆಯ ನಿರ್ಮಾಣದ ದಾಖಲೆಗಳನ್ನು ನೀಡುವಂತೆ ಸುಬ್ರಹ್ಮಣ್ಯ ಅವರನ್ನು ಕರೆಸಿ ಕೊಲೆ ಮಾಡಲಾಗಿದೆ. ಸ್ನೇಹಿತರಾದ ಸಿದ್ದೇಶ್, ವಿಶ್ವಾಸ್ ಈ ಕೃತ್ಯಕ್ಕೆ ಜೊತೆಯಾಗಿದ್ದರು ಎನ್ನಲಾಗಿದೆ.
ಮೇ 31 ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪತ್ನಿ ಮೀನಾಕ್ಷಮ್ಮ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ರಹಸ್ಯ ಗೊತ್ತಾಗಿದೆ. ಸದ್ಯ ಪ್ರದೀಪ್ , ಸಿದ್ದೇಶ್, ವಿಶ್ವಾಸ್ ಬಂಧಿಸಿರುವ ಕಡೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಬರಮಾಡಿಕೊಂಡ ರಾಜ್ಯಪಾಲರು