ನ್ಯೂಸ್ ನಾಟೌಟ್ : ಹಬ್ಬ ಅಂದ ಕೂಡಲೇ ಬಗೆ ಬಗೆಯ ಖಾದ್ಯಗಳನ್ನು ರೆಡಿ ಮಾಡೋದು ಸಾಮಾನ್ಯ.ತರಹೇವಾರಿ ತಿಂಡಿ ತಿನಿಸುಗಳಿದ್ದರೇನೆ ಆ ಹಬ್ಬಕ್ಕೆ ಅರ್ಥ ಬರೋದು.. ಆದರೆ ಹಬ್ಬಕ್ಕೆ ಅಬ್ಬಬ್ಬಾ ಅಂದ್ರೆ ಎಷ್ಟು ತಿಂಡಿಗಳನ್ನು ರೆಡಿ ಮಾಡಬಹುದು? ಕನಿಷ್ಟ ಅಂದ್ರೆ ೧೫ ಬಗೆಯ ಖಾದ್ಯಗಳನ್ನು ರೆಡಿ ಮಾಡಬಹುದು.. ಆದರೆ ಇಲ್ಲೊಬ್ಬರು ಮಹಿಳೆ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಬರೋಬ್ಬರಿ ೮೮ ಬಗೆಯ ಖಾದ್ಯ ಸಿದ್ದಪಡಿಸಿ ಭಾರಿ ವೈರಲ್ ಆಗಿದ್ದಾರೆ.
ಹೌದು,ಇದರ ಪೊಟೋವನ್ನು ಮಂಗಳೂರಿನ ವೈದ್ಯರೊಬ್ಬರು ತಮ್ಮ ಎಕ್ಸ್ (ಟ್ವಿಟರ್)ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಪದ್ಮನಾಭ್ ಕಾಮತ್ ಅವರು ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯ ಗಳ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಕೃಷ್ಣನ ಮುಂದೆ 88 ಬಗೆಯ ತಿನಿಸುಗಳನ್ನು ಇಡಲಾಗಿದೆ.ಇದರ ಮಧ್ಯೆ ಭಕ್ತೆ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿರುವ ಜೊತೆಗೆ ‘ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೇಳಲಾಗಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ.ಗೋಕುಲಾಷ್ಟಮಿ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವೈರಲ್ ಆಗಿದೆ.
ಇಂತಹ ಅಪರೂಪದ ಫೋಟೋ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.ಕೃಷ್ಣನ ಮೇಲಿನ ಭಕ್ತಿಯನ್ನು ಕೊಂಡಾಡಿದ್ದಾರೆ.ನಿಜವಾಗ್ಲೂ ಇಷ್ಟೋ ವೆರೈಟಿ ತಿನಿಸು ಮಾಡಬೇಕಂದ್ರೆ ತಾಳ್ಮೆ ಇರಲೇ ಬೇಕು. ಈ ಮಹಿಳೆಯ ಪ್ರಯತ್ನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕೆಂದು ಶ್ಲಾಘಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸಾಮಾನ್ಯವಾಗಿ ಜನರು ವಿಧ ವಿಧವಾದ ಉಂಡೆ, ಕೋಸಂಬರಿ, ಗೊಜ್ಜು ಅವಲಕ್ಕಿ, ಪಾಯಿಸ ಮಾಡಿ, ಕೃಷ್ಣನಿಗೆ ನೇವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಭಕ್ತರು ಪ್ರೀತಿಯಿಂದ ಇತರ ಖಾದ್ಯಗಳನ್ನು ಅರ್ಪಿಸುತ್ತಾರೆ. ಆದರೆ ಇಲ್ಲಿ ಬರೋಬ್ಬರಿ ೮೮ ಖಾದ್ಯಗಳಿದ್ದು ಆಶ್ಚರ್ಯ ತಂದಿದೆ.