ನ್ಯೂಸ್ ನಾಟೌಟ್: ವಾಟ್ಸಪ್ ನಲ್ಲಿ ಬಂದ ಲಿಂಕನ್ನು ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಂಡ ಬಳಿಕ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದ್ದು ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.20ರಂದು ನಗರದ ವ್ಯಕ್ತಿಯೊಬ್ಬರಿಗೆ ವಾಟ್ಸಪ್ ಗ್ರೂಪ್ ನಲ್ಲಿ ಪಿ.ಎಂ.ಕಿಸಾನ್ ಯೋಜನಾ ಎಪಿಕೆ ಎಂಬ ಹೆಸರಿನಲ್ಲಿ ಪೋಸ್ಟ್ ಲಿಂಕ್ ಬಂದಿದ್ದು, ಲಿಂಕ್ ಡೌನ್ ಲೋಡ್ ಮಾಡಿದ ಕೂಡಲೇ, ವ್ಯಕ್ತಿಯ ಗಮನಕ್ಕೆ ಬರುವಷ್ಟರಲ್ಲಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 10.49ಲಕ್ಷ ರೂ. ಕಡಿತಗೊಂಡಿದೆ.
ಮಾ.22ರಂದು ಚಿಕ್ಕಮಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಸೈಬರ್ ವಂಚನೆ ಪ್ರಕರಣದಲ್ಲಿ ಎಪಿಕೆ( ಆಂಡ್ರಾಯ್ಡ್ ಪ್ಯಾಕೇಜ್ ) ಫೈಲ್ ವಂಚನೆಗಳು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಮೋಸ ಮಾಡಲಾಗುತ್ತಿದೆ. ಈ ರೀತಿಯ ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳದಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.