ನ್ಯೂಸ್ ನಾಟೌಟ್: ಬಂಟ್ವಾಳ ತಾಲೂಕಿನ ವಿಟ್ಲಮೂಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ಕಲ್ಲು ಕ್ವಾರಿಯೊಂದರಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡು ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಹಾನಿದ ಘಟನೆ (ಮಾ.4) ನಡೆದಿದೆ.
ಈ ಸಂಬಂಧ ಎಸ್ಪಿ ಯತೀಶ್ ಸೂಚನೆಯಂತೆ ಕೋರೆಯ ಮ್ಯಾನೇಜರ್‌ನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಫೋಟಕವನ್ನು ಸ್ಥಳದಲ್ಲಿ ತಂದಿಟ್ಟವರನ್ನು ಹಾಗೂ ಸ್ಫೋಟಕ ತಂದ ವಾಹನವನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸ್ ಎಸ್ಪಿ ಸೂಚಿಸಿದ ಮೇರೆಗೆ ಈ ಕ್ರಮ ನಡೆದಿದೆ ಎನ್ನಲಾಗಿದೆ.
ಮಂಗಳವಾರ ಮಾಡತ್ತಡ್ಕದ ಕೋರೆಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಪೋಟಗೊಂಡಿದ್ದು ವಿಟ್ಲ ಪೇಟೆ ಸೇರಿ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿತ್ತು. ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಯಾಗಿದ್ದು ನೂರು ಮೀಟರು ದೂರದಲ್ಲಿರುವ ಎರಡು ಮನೆಗಳ ಭಾವಣೆ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿವೆ.
ಮಾಡತ್ತಡ್ಕ ಎನ್.ಎಸ್. ಕೋರೆಯ ಸಮೀಪದಲ್ಲೇ ಘಟನೆ ನಡೆದಿದ್ದು ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ ಹಾಗೂ 200 ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೆ ಇಡಲಾಗಿತ್ತು ಎನ್ನಲಾಗಿದೆ. ಮಧ್ಯಾಹ್ನ ಸುಮಾರು 1.25ರ ವೇಳೆ ಇದು ಸ್ಫೋಟಗೊಂಡಿದೆ. ಸ್ಫೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕಹಾಗೂ ಅವರ ಪುತ್ರ ವಸಂತ ಮೋಹನ್ ಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ, 1 ಕಿ. ಮೀ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.
ಕಲ್ಲು ಸ್ಫೋಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ತೀವ್ರ ಶಾಖದಿಂದಾಗಿ ಸ್ಫೋಟಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ಶಬ್ದ ಮತ್ತು ನಡುಕವು ಗ್ರಾಮದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿಯೂ ಕಂಡುಬಂದಿದೆ. ಕಂಪನದ ಕೇಂದ್ರಬಿಂದುವಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಇತರ 15 ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.