ನ್ಯೂಸ್ ನಾಟೌಟ್: ಹೊಸ ಹೊಸ ಕನಸುಗಳನ್ನಿಟ್ಟುಕೊಂಡು ಮದುವೆಯಾದ ವರನಿಗೆ ಆಘಾತವಾಗಿದೆ. ಏಕೆಂದರೆ ಮದುವೆಯಾದ ಕೇವಲ ಎರಡನೇ ದಿನಗಳಲ್ಲಿ ವಧು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಹೇಗೆ ಸಾದ್ಯ .. ಕೊನೆ ಪಕ್ಷ ಮದುವೆ ದಿನವಾದರೂ ಯಾರಿಗೂ ಗೊತ್ತಾಗಲಿಲ್ವ? ಇದು ವರ ಮತ್ತು ಆತನ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೋಡಿಯೊಂದರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಮದುವೆಯಾದ ಎರಡು ದಿನಗಳವೆಗೂ ನವವಿವಾಹಿತರು ಒಟ್ಟಿಗೆ ಸಂತೋಷವಾಗಿದ್ದರು. ಆದರೆ ಇದ್ದಕ್ಕಿದ್ದಂತೆ ವಧು ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಫೆಬ್ರವರಿ 24ರಂದು ಪ್ರಯಾಗ್‌ರಾಜ್ ಜಿಲ್ಲೆಯ ಜಸ್ರಾ ಗ್ರಾಮದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಫೆಬ್ರವರಿ 25ರಂದು ವಧು ಗಂಡನ ಮನೆಗೆ ಬಂದಿದ್ದಳು. ಆಕೆಯ ಆಗಮನದಿಂದ ಮನೆಯಲ್ಲಿ ಪ್ರತಿಯೊಬ್ಬರೂ ಖುಷಿಯಲ್ಲಿದ್ದರು. ಅತಿಥಿಗಳು, ಸಂಬಂಧಿಕರು ಮತ್ತು ನೆರೆಹೊರೆಯವರೆಲ್ಲರೂ ವಧುವಿಗೆ ಆಶೀರ್ವದಿಸಿದ್ದರು. ಮರುದಿನ (ಫೆ.26) ಬೆಳಗ್ಗೆ ಮನೆಯ ಎಲ್ಲಾ ಕುಟುಂಬಸ್ಥರಿಗೆ ನವವಧು ತಿಂಡಿ-ಕಾಫಿ ನೀಡಿದ್ದಳು. ಆದರೆ ಸಂಜೆ ಆಕೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತನಗೆ ವಿಪರಿತ ಹೊಟ್ಟೆನೋವು ಬಂದಿದೆ ಅಂತಾ ಆಕೆ ಅಳುತ್ತಾ ಗೋಳಾಡಿದ್ದಳು. ಕೂಡಲೇ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಬಂದದ್ದೇ ಗುಡ್ ನ್ಯೂಸ್ ! ಆದರೆ ಆಕೆ ಗಂಡನ ಪಾಲಿಗೆ ಇದು ಬ್ಯಾಡ್ ನ್ಯೂಸ್ ಆಗಿತ್ತು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿಯಾಗಿದ್ದಾಳೆ, ಕೂಡಲೇ ಹೆರಿಗೆ ಮಾಡಬೇಕು ಎಂದು ಹೇಳಿದ್ದಾರೆ. ಇದರಿಂದ ವರ ಮತ್ತು ಆತನ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ.ಕೂಡಲೇ ವರನಿಂದ ವೈದ್ಯಕೀಯ ಒಪ್ಪಿಗೆ ಪತ್ರಗಳಿಗೆ ಸಹಿ ಪಡೆಯಲಾಯಿತು. ಮುಂದಿನ 2 ಗಂಟೆಯಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಗರ್ಭಧಾರಣೆಯನ್ನು ಮುಚ್ಚಿಟ್ಟು ಮೋಸದಿಂದ ಮದುವೆ ಮಾಡಿದ್ದೀರಿ ಅಂತ ವರ ಮತ್ತು ಆತನ ಕುಟುಂಬಸ್ಥರು ವಧುವಿನ ಕುಟುಂಬಸ್ಥರ ಜೊತೆಗೆ ಜಗಳವಾಡಿದ್ದಾರೆ. ನಾವು ನಿಮ್ಮ ಮಗಳನ್ನ ನಮ್ಮ ಮನೆಗೆ ಸೇರಿಸುವುದಿಲ್ಲವೆಂದು ವರನ ಕುಟುಂಬಸ್ಥರು ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ.
ʼಮದುವೆಗೂ ಮೊದಲೇ ನಿಮ್ಮ ಮಗನೇ ನಮ್ಮ ಮಗಳಿಗೆ ಏನೋ ಮಾಡಿದ್ದಾನೆʼ ಅಂತಾ ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.ಆದರೆ ನಾನು ಏನೂ ಮಾಡಿಲ್ಲವೆಂದು ಪಟ್ಟುಹಿಡಿದ ವರ, ʼನಿಮ್ಮ ಮಗಳಿಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲʼ. ಇನ್ಮುಂದೆ ನಾನು ನಿಮ್ಮ ಮಗಳ ಜೊತೆ ಬಾಳುವುದಿಲ್ಲʼವೆಂದು ಹೇಳಿದ್ದಾನೆ. ಮದುವೆಗೆ ಮಾಡಿರುವ ಖರ್ಚನ್ನು ವಾಪಸ್ ನೀಡಿ ಅಂತಲೂ ಹೇಳಿದ್ದಾರೆ. ʼನಾವು ಒಂದು ಪೈಸೆ ಕೂಡ ನೀಡುವುದಿಲ್ಲ. ನಮ್ಮ ಮಗಳನ್ನ ನಮ್ಮ ಹತ್ತಿರವೇ ಇಟ್ಟುಕೊಂಡು, ನಾವೇ ಈ ಮಗುವನ್ನ ಸಾಕುತ್ತೇವೆʼ ಅಂತಾ ವರನ ಕುಟುಂಬಸ್ಥರಿಗೆ ವಧುವಿನ ಕುಟುಂಬಸ್ಥರು ಹೇಳಿದ್ದಾರೆ. ಇದೀಗ ಈ ಪ್ರಕರಣ ಪಂಚಾಯ್ತಿ ಮೆಟ್ಟಿಲೇರಿದೆ.ಮುಂದೇನಾಗುತ್ತೋ ಕಾದು ನೋಡಬೇಕು..!