ನ್ಯೂಸ್ ನಾಟೌಟ್: ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ತನಗೆ ಮೂತ್ರ ಬರುತ್ತದೆಯೆಂದು ಕಾರಣ ನೀಡಿ ಏಕಾಏಕಿ ಪರಾರಿಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಎಷ್ಟೇ ಕಾದರೂ ಆ ವ್ಯಕ್ತಿ ಮತ್ತೆ ಬಸ್ ನತ್ತ ವಾಪಾಸ್ಸಾಗದೇ ಇದ್ದು, ಬಸ್ ನಿರ್ವಾಹಕನ ತಲೆ ನೋವಿಗೆ ಕಾರಣವಾಗಿದೆ.
ಮೇ 14ರ ತಡರಾತ್ರಿ ಈ ಘಟನೆ ಸಂಭವಿಸಿದ್ದು,ಮಧ್ಯಪ್ರದೇಶ ಮೂಲದ ವ್ಯಕ್ತಿ ಎನ್ನಲಾಗಿದೆ. ಈತ ಮೂತ್ರ ವಿಸರ್ಜನೆ ನೆಪದಲ್ಲಿ ಶಿರಾಡಿ ಘಾಟಿ ಪ್ರದೇಶದಲ್ಲಿ ಇಳಿದಿದ್ದು ಬಳಿಕ ಕಣ್ಮರೆಯಾಗಿದ್ದಾನೆ. ಆತ ಮರಳಿ ಬರುತ್ತಾನೆ ಎಂದು ಕಾದು ಕುಳಿತ ಬಸ್ ನಿರ್ವಾಹಕ ಕೊನೆಗೆ ಮರಳಿ ಬಾರದೇ ಇರುವುದನ್ನು ಗಮನಿಸಿ ಆತನ ಪತ್ತೆಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶ ಮೂಲದ ಶ್ರೀಪಾಲ್ ನರ್ರೆ (37) ಎಂಬ ವ್ಯಕ್ತಿ ಪ್ರಯಾಣ ಬೆಳೆಸಿದ್ದ. ಶಿರಾಡಿ ಘಾಟಿ ತಲುಪುತ್ತಿದ್ದಂತೆ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸಿದ್ದು, ಮೂತ್ರ ವಿಸರ್ಜನೆಯ ಕಾರಣ ಇರಬೇಕೆಂದು ಭಾವಿಸಿದ ನಿರ್ವಾಹಕ ಬಸ್ಸನ್ನು ನಿಲ್ಲಿಸುತ್ತಾರೆ. ನಂತರ ಕೆಳಗೆ ಇಳಿದವನೇ ಹೆದ್ದಾರಿಯಲ್ಲಿ ಓಡಿ ಹೋಗಿದ್ದಾನೆಂದು ಹೇಳಲಾಗಿದೆ. ಈ ವೇಳೆ ಮರಳದೇ ಇದ್ದಾಗ ಬಸ್ಸನ್ನು ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಆ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತಿತರ ಮಾಹಿತಿ ಸಂಗ್ರಹಿಸಿ ಬಸ್ಸನ್ನು ಮುಂದುವರಿಸಲು ಅನುವು ಮಾಡಿದರು. ಆತನ ಸುಳಿವು ಮಾತ್ರ ಪತ್ತೆಯಾಗಿಲ್ಲ.