ಕ್ರೈಂ

2016ರಲ್ಲಿ ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ, ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ

196

ನ್ಯೂಸ್ ನಾಟೌಟ್: 2016ರಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.

ಉಳ್ಳಾಲ ಕೋಟೆಪುರದಲ್ಲಿ 2016ರ ಎ. 12ರ ಮುಂಜಾನೆ ಕೋಮುದ್ವೇಷದಿಂದ ರಾಜೇಶ್‌ ಕೋಟ್ಯಾನ್ ಆಲಿಯಾಸ್ ರಾಜ (44) ಎಂಬುವವರ ಕೊಲೆ ನಡೆದಿತ್ತು. ಉಳ್ಳಾಲ ಕೋಡಿ ರೋಡ್‌ನ‌ ಮೊಹಮ್ಮದ್ ಆಸೀಫ್ ಆಲಿಯಾಸ್ ಆಚಿ (31), ಮುಕ್ಕಚೇರಿಯ ಮೊಹಮ್ಮದ್ ಸುಹೈಲ್ ಆಲಿಯಾಸ್ ಸುಹೈಲ್ (28), ಕೋಡಿ ಮಸೀದಿ ಬಳಿಯ ಅಬ್ದುಲ್‌ ಮುತಾಲಿಪ್ ಆಲಿಯಾಸ್ ಮುತ್ತು (28) ಮತ್ತು ಉಳ್ಳಾಲ ಉಳಿಯ ರಸ್ತೆಯ ಅಬ್ದುಲ್‌ ಅಸ್ವೀರ್ ಆಲಿಯಾಸ್ ಅಚ್ಚು (27) ಜೀವಾವಧಿ ಶಿಕ್ಷೆಗೊಳಗಾದವರಾಗಿದ್ದಾರೆ. ಈ ಪ್ರಕರಣದಲ್ಲಿ ಇತರ ಇಬ್ಬರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಇವರ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಎ. 20ರಂದು ನಾಲ್ವರು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 302ರಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫ‌ಲರಾದಲ್ಲಿ ಹೆಚ್ಚುವರಿ 1 ವರ್ಷ ಸಜೆ, ಕಲಂ 201ರಡಿಯಲ್ಲಿ 1 ವರ್ಷ ಸಜೆ ಮತ್ತು ತಲಾ 5,000 ರೂ. ದಂಡ, ದಂಡ ಪಾವತಿಸಲು ವಿಫ‌ಲವಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ, ಕಲಂ 143ರಡಿ 6 ತಿಂಗಳ ಸಾದಾ ಸಜೆ, ಕಲಂ 148ರಡಿಯಲ್ಲಿ 1 ವರ್ಷ ಸಜೆ, ಕಲಂ 153(ಎ) ಅಡಿಯಲ್ಲಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮೊಗವೀರಪಟ್ಟಣದ ಹಿಂದೂ ಮತ್ತು ಮುಸ್ಲಿಮರ ನಡುವೆ ಹಲವು ಸಮಯದಿಂದ ಕೋಮುಸಂಘರ್ಷ ನಡೆಯುತ್ತಿತ್ತು. ಆರೋಪಿಗಳು ಒಂಟಿಯಾಗಿ ಬರುವ ಮೊಗವೀರಪಟ್ಣದ ಹಿಂದೂವೊಬ್ಬನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದ್ದರು. ಅದರಂತೆ 2016 ಎ. 12ರ ಮುಂಜಾನೆ ಕೋಟೆಪುರ ರಸ್ತೆಯಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ರಾಜೇಶ್‌ ಕೋಟ್ಯಾನ್ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಲಾಗಿತ್ತು. ಮರದ ದೊಣ್ಣೆಗಳಿಂದ ಹೊಡೆಯಲಾಗಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸ್‌ ನಿರೀಕ್ಷಕ ಅಶೋಕ್‌ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

See also  ಮಗುವನ್ನು ಗಾಯಗೊಳಿಸಿ ಚರ್ಮರೊಗವೆಂದು ಸುಳ್ಳು ಹೇಳಿದ್ದ ಆಸ್ಪತ್ರೆ ಸಿಬ್ಬಂದಿ..! ಭಾರೀ ಮೊತ್ತದ ದಂಡ ಕಟ್ಟಲು ಆದೇಶ..! ಪ್ರಕರಣ ಬಯಲಾದದ್ದೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget