ನ್ಯೂಸ್ ನಾಟೌಟ್: ಕರಾವಳಿ ದೈವಾರಾಧನೆಯ ನಾಡು. ಇಲ್ಲಿ ಹಲವಾರು ಕಡೆಗಳಲ್ಲಿ ದೈವೀ ಶಕ್ತಿಯ ಪವಾಡಗಳು ನಡೆದಿರುವ ಉದಾಹರಣೆಗಳಿವೆ. ಇಂಥದೊಂದು ಘಟನೆ ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಾಲಯದಲ್ಲಿ ನಡೆದಿದೆ. ಇಲ್ಲಿನ ದೇವಾಲಯದ ಹುಂಡಿಗೆ ಕಣ್ಣ ಹಾಕಿದ ಕಳ್ಳನಿಗೆ ದೇವಿ ಸರಿಯಾದ ಶಿಕ್ಷೆ ನೀಡಿ ಕಂಬಿ ಎಣಿಸುವಂತಾಗಿದೆ.
ಏನಿದು ಘಟನೆ..?
ಕಡಿಯಾಳಿಯ ಪ್ರಸಿದ್ಧ ಮಹಿಷಮರ್ಧಿನಿ ದೇವಾಲಯದಲ್ಲಿ ಶುಕ್ರವಾರ (ಜು.25) ತಡರಾತ್ರಿ 3 ಗಂಟೆ ಸಮಯದಲ್ಲಿ ಕಳ್ಳರು ನುಗ್ಗಿ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಲು ಇಬ್ಬರು ಯತ್ನಿಸಿದರು. ಈ ವೇಳೆ ದೇವಾಲಯದ ಕಾವಲುಗಾರರ ಗಮನಕ್ಕೆ ವಿಷಯ ಬಂದು ಅವರು ಬೊಬ್ಬೆ ಹಾಕಿದರು. ಇದರಿಂದ ಕಳ್ಳರು ಅಚಾನಕ್ ಬೆಚ್ಚಿಬಿದ್ದಿದ್ದಾರೆ. ಆಗ, ಕಾವಲುಗಾರನಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು.
ಆದರೆ, ಕಾವಲುಗಾರ ತಕ್ಷಣವೇ ಸ್ಥಳೀಯ ಭಕ್ತರಿಗೆ ನಮ್ಮ ದೇವಾಲಯದಲ್ಲಿ ಕಳ್ಳತನ ಮಾಡುವುದಕ್ಕೆ ಯಾರೋ ದುಷ್ಕರ್ಮಿಗಳು ಆಯುಧ ಸಮೇತವಾಗಿ ಬಂದಿದ್ದಾರೆ ಎಂಬ ಮಾಹಿತಿ ನೀಡಿದ್ದು, ದೇವಾಲಯದ ಆವರಣದಲ್ಲಿ ಜನ ಸೇರುವಂತೆ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಕಡಿಯಾಳಿ ಗ್ರಾಮಸ್ಥರು ದೇವಸ್ಥಾನದಲ್ಲಿ ಧಾವಿಸಿದ್ದಾರೆ. ಸುಮಾರು ಜನರು ಗುಂಪು ಸೇರಿ ದೇವಸ್ಥಾನದ ಸುತ್ತಲೂ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ದೇವಾಲಯದ ಸುತ್ತಲಿನ ಸ್ಥಳಗಳನ್ನು ಪರಿಶೀಲಿಸಿದಾಗಲೂ ಸಿಗದಿದ್ದಾಗ, ಮತ್ತು ಶೋಧ ಕಾರ್ಯದ ವ್ಯಾಪ್ತಿಯನ್ನು ವಿಸ್ತರಿಸಿ ರಸ್ತೆಗಳಲ್ಲಿ ಹುಡುಕಲು ಮುಂದಾಗಿದ್ದಾರೆ. ಆಗ ಕಡಿಯಾಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಓಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಹಚ್ಚಿದರು. ಸ್ಥಳೀಯರು ಅವರನ್ನು ಹಿಂಬಾಲಿಸಿಕೊಂಡು ಹೋದಾಗ ನಾವು ಜನರಿಗೆ ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಓಡುತ್ತಿದ್ದ ವೇಳೆ ಇಬ್ಬರು ಕಳ್ಳರ ಪೈಕಿ ಒಬ್ಬನಿಗೆ ಮೂರ್ಛೆ ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಮತ್ತೊಬ್ಬ ಕಳ್ಳ ತನ್ನ ಸಹಚರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಆತ ಮೇಲೇಳಲಿಲ್ಲ.
ಇನ್ನೇಕು ಜನರು ತುಂಬಾ ಹತ್ತಿರ ಬಂದು ತಮ್ಮನ್ನು ಹಿಡಿಯುತ್ತಾರೆ ಎನ್ನುವವರೆಗೂ ತನ್ನ ಸಹಚರನನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಫಲಿಸದ ಕಾರಣ, ಆತನನ್ನು ಬಿಟ್ಟು ಇನ್ನೊಬ್ಬ ಕಳ್ಳ ಓಡಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಗುಂಪು, ಗುಂಪಾಗಿ ಸೇರಿದ್ದ ಜನರು ಆತನನ್ನು ಹಿಡಿದುಕೊಂಡರು. ಈ ವೇಳೆ ಅಚಾನಕ್ ಮೂರ್ಛೆ ಹೋದ ಕಳ್ಳನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಈಗ ಮೂರ್ಛೆ ಹೋಗಿರುವ ಕಳ್ಳ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರೂ ಕಳ್ಳರು ಕೇರಳ ಮೂಲದವರು ಎಂಬುದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಉಡುಪಿ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.