ನ್ಯೂಸ್ ನಾಟೌಟ್:26 ಪ್ರವಾಸಿಗರನ್ನು ಹತ್ಯೆಗೈದ ಉಗ್ರ ಕೃತ್ಯದಲ್ಲಿ ಶಾಮೀಲಾಗಿರುವ ಲಷ್ಕರ್ ಉಗ್ರರ ಬೆನ್ನು ಹತ್ತಿರುವ ಸೇನೆ ಮತ್ತು ಪೊಲೀಸ್ ಪಡೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.ಇಂದು ಬೆಳಗ್ಗೆ ಬಂಡಿಪೋರಾದಲ್ಲಿ ನಡೆದ ಸೇನಾ ಎನ್ ಕೌಂಟರ್ ನಲ್ಲಿ ಲಷ್ಕರ್ ಇ ತೊಯ್ಬಾದ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ. ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಬಂಡಿಪೋರಾದಲ್ಲಿ ಜಂಟಿ ಕಾರ್ಯಾಚರಣೆಗೆ ಇಳಿದಿತ್ತು.
ಜಂಟಿ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.ಇದಕ್ಕೆ ಪ್ರತಿಯಾಗಿ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಟಾಪ್ ಕಮಾಂಡರ್ ಅಲ್ತಾಫ್ ಹತ್ಯೆಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಬಂಡಿಪೋರಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ ಅವರು ಮಾಹಿತಿ ನೀಡಿದ್ದಾರೆ.