ನ್ಯೂಸ್ ನಾಟೌಟ್: ಕಳ್ಳತನ ನಡೆಸಿ ಅದರಲ್ಲಿ ಸಿಕ್ಕಿದ ದುಡ್ಡಿನಲ್ಲಿ ತನ್ನ ಗೆಳತಿಯರನ್ನು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರೆದುಕೊಂಡು ಹೋಗಿ ವಾಪಸ್ಸಾಗುವ ವೇಳೆ ರೈಲು ನಿಲ್ದಾಣದಲ್ಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಗುರುವಾರ (ಫೆ.22) ಇಂದೋರ್ ನಲ್ಲಿ ನಡೆದಿದೆ.
ಇಂದೋರ್ ನ ದ್ವಾರಕಾಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯದಿಂದ ಹಲವಾರು ಕಳ್ಳತನ ಪ್ರಕರಣಗಳು ನಡೆಯುತ್ತಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ದ್ವಾರಕಾಪುರಿ ಪೊಲೀಸರು ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು. ಅಲ್ಲದೆ ಕಳ್ಳತನ ನಡೆದ ಮನೆಗೆ ತೆರಳಿ ಕಳ್ಳತನ ನಡೆಸಿದ ಆರೋಪಿಗಳ ಬೆರಳಚ್ಚು ಮಾದರಿಯನ್ನು ಪಡೆದುಕೊಂಡು ಬಳಿಕ ಶ್ವಾನದಳದ ಸಹಾಯದಿಂದ ಆರೋಪಿಗಳ ಜಾಡು ಪತ್ತೆಹಚ್ಚಲು ಮುಂದಾಗಿದ್ದರು. ಈ ವೇಳೆ ಕಳ್ಳತನ ನಡೆಸಿರುವುದು ಇಂದೋರ್ ನ ನಿವಾಸಿಯಾಗಿರುವ ಅಜಯ್ ಶುಕ್ಲಾ ಮತ್ತು ಸಂತೋಷ್ ಕೋರಿ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಕೂಡಲೇ ಅಜಯ್ ಹಾಗೂ ಸಂತೋಷ್ ನನ್ನ ಬಂಧಿಸಲು ಅವರ ಮನೆಗೆ ತೆರಳಿದಾಗ ಅವರು ಮನೆ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಇದಾದ ಬಳಿಕ ಪೊಲೀಸರು ಪೊಲೀಸರು ಇಬ್ಬರು ಆರೋಪಿಗಳ ಮೊಬೈಲ್ ಲೊಕೇಶನ್ ಪತ್ತೆಹಚ್ಚುವಾಗ ಇಬ್ಬರೂ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಕ್ಕೆ ಹೋಗಿರುವುದು ಗೊತ್ತಾಗಿದೆ. ಇದಾದ ಬಳಿಕ ಪೊಲೀಸರ ತಂಡ ಪ್ರಯಾಜ್ ರಾಜ್ ಗೆ ತೆರಳಿ ಆರೋಪಿಗಳನ್ನು ಪತ್ತೆಹಚ್ಚಲು ಯತ್ನಿಸಿದ್ದಾರೆ. ಆದರೆ ಆರೋಪಿಗಳು ಆಗಾಗ್ಗೆ ಮೊಬೈಲ್ ನೆಟ್‌ವರ್ಕ್ ಮತ್ತು ಟವರ್ ಲೊಕೇಶನ್ ಬದಲಾಯಿಸಿದ್ದರಿಂದ ಆರೋಪಿಗಳ ಪತ್ತೆ ಸವಾಲಾಗಿತ್ತು.
ಇದನ್ನೂ ಓದಿ: ಕಾಸರಗೋಡು: ತೋಟದ ಕೆರೆಯಲ್ಲಿ ತಾಯಿ ಮತ್ತು 2 ವರ್ಷದ ಮಗುವಿನ ಮೃತದೇಹ ಪತ್ತೆ..! ಪ್ರಕರಣ ದಾಖಲು..!
ಇದಾದ ಬಳಿಕ ಆರೋಪಿಗಳು ಪ್ರಯಾಗ್ ರಾಜ್ ನಿಂದ ಇಂದೋರ್ ಗೆ ರೈಲಿನಲ್ಲಿ ಬರುತ್ತಿರುವ ಮಾಹಿತಿ ಕಲೆ ಹಾಕಿದ ಪೊಲೀಸರು ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಇಬ್ಬರನ್ನು ಬಂಧಿಸಿದ್ದಾರೆ.