ನ್ಯೂಸ್ ನಾಟೌಟ್ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯೊಳಗೆ ಪತ್ತೆಯಾದ ಮಹಿಳೆಗೆ ಇಸ್ರೇಲ್ ವ್ಯಕ್ತಿಯ ಜೊತೆ ಸಂಬಂಧ ಇತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಏನಿದು ಘಟನೆ..?
ಗೋವಾದಲ್ಲಿ ರಷ್ಯಾ ಮಹಿಳೆ ನೀನಾ ಹಾಗೂ ಇಸ್ರೇಲ್‌ನ ಡ್ರೋರ್ ಗೋಲ್ಡ್ಸ್ಟೀನ್ ( Dror Goldstein) ನಡುವೆ ಪರಿಚಯವಾಗಿ ಪ್ರೇಮ ಶುರುವಾಗಿತ್ತು. 2017ರಲ್ಲಿ ಪ್ರೀತಿಯ ಬಲೆಗೆ ಬಿದ್ದ ರಷ್ಯಾ- ಇಸ್ರೇಲ್ ಪ್ರೇಮ ಪಕ್ಷಿಗಳು ಗೋವಾದಲ್ಲಿ ಲಿವಿಂಗ್ ಟುಗೇದರ್ನಲ್ಲಿದ್ದರು. ಇಬ್ಬರ ನಡುವೆ ಮಾತುಕತೆಯ ನಂತರ ಲಿವಿಂಗ್ ಟುಗೇದರ್ ಸಂಬಂಧ ಶುರುವಾಗಿದೆ. ಎರಡು ಮೂರು ವರ್ಷ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಪರಿಣಾಮ ಇಬ್ಬರು ಮಕ್ಕಳು ಜನಿಸಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆ ಗೋಲ್ಡ್ಸ್ಟೀನ್ ಇಸ್ರೇಲ್‌ಗೆ ಹೋಗಿದ್ದ. ಇಸ್ರೇಲ್ನಿಂದಲೇ ಗೋವಾದಲ್ಲಿದ್ದ ಪ್ರಿಯತಮೆಯಿದ್ದ ಮನೆಯ ಬಾಡಿಗೆ, ಖರ್ಚು ವೆಚ್ಚಕ್ಕೆ ಹಣ ಕಳುಹಿಸುತ್ತಿದ್ದ. ಆದರೆ ಇತ್ತೀಚೆಗೆ ರಷ್ಯಾದ ನೀನಾ ಮಕ್ಕಳೊಂದಿಗೆ ಗೋವಾದಿಂದ ನಿಗೂಢವಾಗಿ ಕಣ್ಮರೆಯಾಗಿದ್ದಳು. ಈ ಬಗ್ಗೆ ಡ್ರೋರ್ ಗೋಲ್ಡ್ಸ್ಟೀನ್ ಗೋವಾದಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಇದೀಗ ನೀನಾ, ಮಕ್ಕಳ ಜೊತೆ ಗೋಕರ್ಣದಲ್ಲಿ ಪತ್ತೆಯಾಗಿದ್ದಾರೆ. ಈ ವಿಷಯ ಮಾಧ್ಯಮಗಳ ಮೂಲಕ ಇಸ್ರೇಲ್ನಲ್ಲಿದ್ದ ಡ್ರೋರ್ ಗೋಲ್ಡ್ಸ್ಟೀನ್ಗೆ ಗೊತ್ತಾಗಿದೆ. ತಕ್ಷಣವೇ ಬೆಂಗಳೂರಿಗೆ ಬಂದಿದ್ದಾರೆ. ಇಬ್ಬರು ಮಕ್ಕಳನ್ನ ತಮ್ಮ ಜೊತೆ ಕಳಿಸಬೇಕು ಅನ್ನೋದು ಡ್ರೋರ್ ಗೋಲ್ಡ್ಸ್ಟೀನ್ ಒತ್ತಾಯ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳಿಗೆ ಒಳ್ಳೆಯ ಜೀವನ ನೀಡಬೇಕು. ಹೀಗಾಗಿ ಮಕ್ಕಳನ್ನು ತನ್ನ ಜೊತೆ ಕಳಿಸುವಂತೆ ಡ್ರೋರ್ ಗೋಲ್ಡ್ಸ್ಟೀನ್ ಭಾರತದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಷ್ಯಾ ಮಹಿಳೆ ನೀನಾ, ಮಕ್ಕಳನ್ನು ಡ್ರೋರ್ ಗೋಲ್ಡ್ಸ್ಟೀನ್ ಜೊತೆ ಕಳಿಸಲು ಒಪ್ಪುತ್ತಿಲ್ಲ. ಬಹುಶಃ ಈ ವಿಷಯಕ್ಕೆ ಏನಾದರೂ ನೀನಾ ಹಾಗೂ ಡ್ರೋರ್ ಗೋಲ್ಡ್ಸ್ಟೀನ್ ನಡುವೆ ಭಿನ್ನಾಭಿಪ್ರಾಯ ಬಂದು ನೀನಾ, ಗೋವಾದಿಂದ ಗೋಕರ್ಣಕ್ಕೆ ಸದ್ದಿಲ್ಲದೇ ಬಂದು ಗುಹೆ ಸೇರಿರಬಹುದು. ರಷ್ಯಾದ ಮಹಿಳೆ ನೀನಾ ಹಾಗೂ ಇಬ್ಬರು ಮಕ್ಕಳನ್ನು ಸದ್ಯ ತುಮಕೂರು ನಗರದ ದಿಬ್ಬೂರಿನಲ್ಲಿರುವ ವಿದೇಶಿ ಪ್ರಜೆಗಳ ಡೀಟೆನ್ಸೆನ್ ಸೆಂಟರ್ನಲ್ಲಿ ಇರಿಸಲಾಗಿದೆ.