ನ್ಯೂಸ್ ನಾಟೌಟ್: ಹಿಮಾಚಲ ಪ್ರದೇಶದಲ್ಲಿ ಉಂಟಾಗಿರುವ ಮೇಘಸ್ಫೋಟಕ್ಕೆ ಹಲವರು ದುರಂತ ಅಂತ್ಯ ಕಂಡಿದ್ದಾರೆ. ಮುಂಗಾರು ಆರಂಭದ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆ, ರಾಜ್ಯದ ಹಲವು ಭಾಗಗಳಲ್ಲಿ ಭೂಕುಸಿತ, ದಿಢೀರ್ ಪ್ರವಾಹಗಳು ಸಂಭವಿಸುತ್ತಲೇ ಇವೆ. ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 70ಕ್ಕೂ ಅಧಿಕವಾಗಿದೆ. ಈ ಮಧ್ಯೆ ಕಟ್ಟಡವೊಂದರಲ್ಲಿ ವಾಸವಿದ್ದ 67 ಜನರು ಕೇವಲ ಒಂದು ಶ್ವಾನದ ಬೊಗುಳಿವಿಕೆಯಿಂದ ಬದುಕುಳಿದ ರೀತಿ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.
ಜೂನ್ 30ರ ಮಧ್ಯರಾತ್ರಿ ಮತ್ತು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಹಿಮಾಚಲದ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮವು ಪ್ರವಾಹ, ಭೂಕುಸಿತಕ್ಕೆ ಅಕ್ಷರಶಃ ನಲುಗಿತ್ತು. ಈ ವೇಳೆ ಪ್ರಕೃತಿ ವಿಸ್ಮಯ ಮತ್ತು ವಿಕೋಪಗಳನ್ನು ಅರಿತ ಶ್ವಾನವೊಂದು, ಸುಖ ನಿದ್ರೆಗೆ ಜಾರಿದ್ದ ಜನರನ್ನು ನಿರಂತರ ಬೊಗುಳುವಿಕೆಯಿಂದ ಬಡಿದೆಬ್ಬಿಸುವಲ್ಲಿ ಯಶಸ್ವಿಯಾಗಿದೆ. ಜೋರು ಧ್ವನಿಯಲ್ಲಿ ಪದೇ ಪದೆ ಬೊಗುಳುತ್ತಿದ್ದ ಶ್ವಾನವನ್ನು ನೋಡಲು ಬಂದ ಓರ್ವ, ಕಟ್ಟಡದಲ್ಲಿ ಬಿರುಕು ಮೂಡಿ, ಮಳೆ ನೀರು ಒಳಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಶ್ವಾನದ ಜೊತೆಗೆ 20 ಕುಟುಂಬಗಳ 67 ಜನರನ್ನು ದುರಂತದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರಿಸಿದ ಸಿಯಾಥಿ ನಿವಾಸಿ ನರೇಂದ್ರ, ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ಶ್ವಾನ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಶುರು ಮಾಡಿತು. ಮಧ್ಯರಾತ್ರಿಯ ಸುಮಾರಿಗೆ ವಿಪರೀತ ಮಳೆಯಾಗುತ್ತಿತ್ತು. ಈ ವೇಳೆ ಏಕೆ ಇಷ್ಟೊಂದು ಜೋರಾಗಿ ಬೊಗಳುತ್ತಿದೆ ಎಂದು ನೋಡಲು ತೆರಳಿದೆ. ಆಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿ, ನೀರು ನುಗ್ಗುವತ್ತ ಮುಖ ಮಾಡಿತ್ತು. ಕೂಡಲೇ ನಾನು ಶ್ವಾನದೊಂದಿಗೆ ಕೆಳಗೆ ಓಡಿ ಎಲ್ಲರನ್ನೂ ಎಬ್ಬಿಸಿ, ಅಲ್ಲಿಂದ ಪ್ರಾಣ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.
ಕೆಲವು ಗಂಟೆಗಳ ಬಳಿಕ ಗ್ರಾಮವು ಭೂಕುಸಿತಕ್ಕೆ ತುತ್ತಾಗಿ, ಹಲವಾರು ಮನೆ, ಕಟ್ಟಡಗಳು ನೆಲಸಮಗೊಂಡಿತು. ಗ್ರಾಮದಲ್ಲಿ ಈಗ ನಾಲ್ಕೈದು ಮನೆಗಳು ಮಾತ್ರ ಉಳಿದಿದ್ದು, ಉಳಿದವರು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಇದರಲ್ಲಿ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ? ಜೀವಂತವಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಸಾಗಿದ್ದು, ಮೃತದೇಹಗಳನ್ನು ಹೊರತೆಗೆಯುವಲ್ಲಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಶ್ವಾನದ ಬೊಗುಳುವಿಕೆಯಿಂದ ಪವಾಡದಂತೆ ಬದುಕುಳಿದವರು ಒಂದು ವಾರದಿಂದ ತ್ರಿಯಂಬಲ ಗ್ರಾಮದಲ್ಲಿ ನಿರ್ಮಿಸಲಾದ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ದುರಂತದಿಂದಾಗಿ ಹಲವಾರು ಗ್ರಾಮಸ್ಥರು ರಕ್ತದೊತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ದುರಂತದಲ್ಲಿ ಸಿಲುಕಿದವರಿಗೆ ಹಿಮಾಚಲ ಪ್ರದೇಶ ಸರ್ಕಾರ 10 ಸಾವಿರ ರೂ. ಹಣವನ್ನು ಸಹಾಯ ಧನವಾಗಿ ನೀಡಿದೆ. ಜೂನ್.20ರಂದು ಸಂಭವಿಸಿದ ಮೇಘಸ್ಫೋಟಕ್ಕೆ ಇಲ್ಲಿಯವರೆಗೂ 78 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.