ನ್ಯೂಸ್ ನಾಟೌಟ್: ಉಪೇಂದ್ರ ತಮ್ಮ ನೆಚ್ಚಿನ ನಟ ರಜನೀಕಾಂತ್ ಜೊತೆಗೆ ತಮಿಳಿನ ‘ಕೂಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ಅದರ ಬೆನ್ನಲ್ಲೆ ಉಪ್ಪಿ ಇದೀಗ ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ.
ತೆಲುಗಿನಲ್ಲಿ ಇನ್ನೂ ಹೆಸರಿಡದ ಸಿನಿಮಾನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ಸೂರ್ಯ ಕುಮಾರ್. ಸಿನಿಮಾವನ್ನು ಸದ್ಯಕ್ಕೆ ‘RAPO22’ ಎಂದು ಕರೆಯಲಾಗುತ್ತಿದೆ. ಸಿನಿಮಾದಲ್ಲಿ ನಾಯಕನಾಗಿ ರಾಮ್ ಪೋತಿನೇನಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದೀಗ ನಟ ಉಪೇಂದ್ರ ಸಹ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಭಾರಿ ಬಜೆಟ್ ನ ಸಿನಿಮಾ ಇದಾಗಿರಲಿದೆ. ಮಹೇಶ್ ಬಾಬು ಪಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಅಷ್ಟಕ್ಕೂ ಇದು ಉಪೇಂದ್ರ ಅವರಿಗೆ ಮೊದಲ ತೆಲುಗು ಸಿನಿಮಾ ಏನಲ್ಲ. ದಶಕಗಳಿಂದಲೂ ಅವರು ತೆಲುಗು ಚಿತ್ರರಂಗದೊಟ್ಟಿಗೆ ನಂಟು ಹೊಂದಿದ್ದಾರೆ. 1997 ರಲ್ಲಿ ಉಪೇಂದ್ರ, ‘ಓಂಕಾರ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದರು. ಅದು ಕನ್ನಡದ ‘ಓಂ’ ಸಿನಿಮಾದ ರೀಮೇಕ್. ಅದಾದ ಬಳಿಕ 1998 ರಲ್ಲಿ ಶ್ರೀಕಾಂತ್ ಜೊತೆಗೆ ‘ಕನ್ಯಾದಾನಂ’ ಸಿನಿಮಾನಲ್ಲಿ ನಟಿಸಿದ್ದರು. ಬಳಿಕ ಅವರೇ ನಾಯಕನಾಗಿ ‘ಒಕೇ ಮಾಟ’ ಅದಾದ ಬಳಿಕ ‘ನೀತೋನೆ ಉಂಟಾ’, ‘ರಾ’ ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ ತೆಲುಗಿನ ‘ಟಾಸ್’ ಸಿನಿಮಾನಲ್ಲಿ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ನಟಿಸಿದರು. ಬಳಿಕ ‘ಸೆಲ್ಯೂಟ್’, 2015 ರಲ್ಲಿ ಅಲ್ಲು ಅರ್ಜುನ್ ಜೊತೆಗೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾನಲ್ಲಿ ನಟಿಸಿದ್ದರು. 2022 ರಲ್ಲಿ ‘ಗನಿ’ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಈಗ ತಮಿಳಿನಲ್ಲಿ ‘ಕೂಲಿ’ ಹಾಗೂ ತೆಲುಗಿನಲ್ಲಿ ಇನ್ನೂ ಹೆಸರಿಡದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
‘ಇ-ಪಾಸ್ ಪೋರ್ಟ್’ ಪರಿಚಯಿಸಿದ ಭಾರತ..! ಸಾಂಪ್ರದಾಯಿಕ ಕಾಗದದ ಪಾಸ್ ಪೋರ್ಟ್ ಗಿಂತ ಇದು ಹೇಗೆ ಭಿನ್ನ..?