ನ್ಯೂಸ್ ನಾಟೌಟ್: ವಿವಾಹವಾಗಲು ಶಾದಿ ಡಾಟ್ ಕಾಮ್‌ನಲ್ಲಿ ವಧುವನ್ನು ಹುಡುಕುತ್ತಿದ್ದ ಟೆಕ್ಕಿಯೊಬ್ಬರು ಅಪರಿಚಿತ ಯುವತಿಯ ಮಾತಿಗೆ ಮರುಳಾಗಿ ಬರೊಬ್ಬರಿ 21 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಾರತ್ಹಳ್ಳಿಯ ನಿವಾಸಿ ಕಿರಣ್ ಕುಮಾರ್ ರಾವ್ (30) ವಂಚನೆಗೊಳಗಾದ ಟೆಕ್ಕಿ. ವಿವಾಹವಾಗುವ ಆಸಕ್ತಿ ಹೊಂದಿದ್ದ ಕಿರಣ್ ಕುಮಾರ್ ರಾವ್, ಕಳೆದ ಏಪ್ರಿಲ್ ನಲ್ಲಿ ಶಾದಿ ಡಾಟ್ ಕಾಂ ವೆಬ್‌ಸೈಟ್ ಮೂಲಕ ವಧುವನ್ನು ಹುಡುಕುತ್ತಿದ್ದರು. ಆ ವೇಳೆ ಆಕೃತಿ ಚೌಧರಿ ಎಂಬುವವರು ಪರಿಚಯವಾಗಿದ್ದರು. ಇಬ್ಬರು ವಾಟ್ಸಾಪ್ ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿ ವಿವಾಹವಾಗಲು ನಿರ್ಧರಿಸಿದ್ದರು. ಈ ನಡುವೆ ಆಕೃತಿ ಚೌಧರಿ ಕೆಲಸಕ್ಕಾಗಿ ಯುಕೆ ದೇಶಕ್ಕೆ ಹೋಗುತ್ತಿರುವುದಾಗಿ ಕಿರಣ್ ಗೆ ತಿಳಿಸಿದ್ದಳು. ಇದಾದ ಬಳಿಕ ಅಪರಿಚಿತ ನಂಬರ್‌ನಿಂದ ಕಿರಣ್ ಮೊಬೈಲ್‌ಗೆ ಕರೆ ಮಾಡಿದ ಆಕೃತಿ ಚೌಧರಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ವಾಟ್ಸಾಪ್ ನಲ್ಲಿ ತಿಳಿಸಿದ್ದಳು. ಆಕೆ ವಿವಾಹವಾಗುವುದಾಗಿ ನಂಬಿಸಿದ್ದ ಹಿನ್ನೆಲೆಯಲ್ಲಿ ಆಕೆಯ ಮಾತಿಗೆ ಮರುಳಾದ ಕಿರಣ್ ಇದಕ್ಕೆ ಒಪ್ಪಿ ಆಕೆ ಕಳುಹಿಸಿದ ವೆಬ್ ಸೈಟ್‌ಗೆ ಭೇಟಿ ನೀಡಿ ಬಿಟ್‌ಕಾಯಿನ್ ಆಪ್ ಡೌನ್‌ಲೋಡ್ ಮಾಡಿದ್ದರು. ಹಂತ-ಹಂತವಾಗಿ ಹಣ ಮಂಗಮಾಯ..! ಮೊದಲಿಗೆ 50 ಸಾವಿರ ರೂ. ಹೂಡಿಕೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ ಲಾಭಾಂಶದ ಹಣ ಪಡೆಯಬಹುದೆಂದು ಆಕೃತಿ ಚೌಧರಿ ತಿಳಿಸಿದ್ದಳು. ಅದರಂತೆ ಕಿರಣ್ ಆಕೆ ಕಳುಹಿಸಿದ ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ 21.24 ಲಕ್ಷ ರೂ. ಕಳುಹಿಸಿದ್ದರು. ಈ ಪೈಕಿ ಲಾಭಾಂಶದ ಹಣವೆಂದು ಕಿರಣ್ ಖಾತೆಗೆ 4,300 ರೂ. ಜಮಾ ಆಗಿತ್ತು. ಇದಾದ ಬಳಿಕ ವರಸೆ ಬದಲಿಸಿದ ಆಕೃತಿ ಇನ್ನುಳಿದ ಹಣವನ್ನು ವಿತ್ ಡ್ರಾ ಮಾಡಲು ಇನ್ನಷ್ಟು ಹೂಡಿಕೆ ಮಾಡುವಂತೆ ಸೂಚಿಸಿದ್ದಳು. ಅನುಮಾನಗೊಂಡ ಕಿರಣ್ ಈ ಬಗ್ಗೆ ಪರಿಶೀಲಿಸಿ ದಾಗ ತಾನು ಸೈಬರ್ ಕಳ್ಳರ ಬಲೆಗೆ ಬಿದ್ದಿರುವುದು ಗೊತ್ತಾಗಿದೆ. ಇನ್‌ವೆಸ್ಟಿಂಗ್ ಟು ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಎಂದು ನಂಬಿಸಿ ಮೋಸ ಮಾಡಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕಿರಣ್ ಕುಮಾರ್ ರಾವ್ ನೀಡಿದ ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.