ನ್ಯೂಸ್ ನಾಟೌಟ್: ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಎಷ್ಟು ಒಳ್ಳೆಯದಿದೆ ಅಷ್ಟೇ ಕೆಟ್ಟದ್ದು ಇದೆ. ಇದಕ್ಕೆ ಪೂರಕವಾಗುವಂತ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಾಲಾ ಶಿಕ್ಷಕರೊಬ್ಬರು ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಶೇಕ್ರಾ ನಾಯ್ಕ ಎಂಬುವರು ವಾಟ್ಸ್ಯಾಪ್‌ನಲ್ಲಿ ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ. ಇಲ್ಲಿ ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಮಡಿದ ವೀರರಿಗೆ ಸ್ಮರಣೆಗಳು. ಇದೇ ವ್ಯವಸ್ಥೆ ಮುಂದುವರಿದರೆ ಭಾರತದ ಭವಿಷ್ಯ ಬ್ಲ್ಯಾಕ್ ಡೇ ಆಗಿ ಪರಿಣಮಿಸಬಹುದು. ಈಗ ನಾವು ಎಚ್ಚೆತ್ತುಕೊಳ್ಳಬೇಕು. ದೇಶ ಮೊದಲು ಎಂದು ಬರೆದುಕೊಂಡಿದ್ದರು. ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಸಂಬಂಧ ಬಿಇಒಗೆ ಶಿಕ್ಷಕನ ವಿರುದ್ಧ ದೂರು ಕೂಡ ನೀಡಲಾಗಿತ್ತು. ಸರ್ಕಾರಿ ನೌಕರನಾಗಿ ಶೇಕ್ರಾ ನಾಯ್ಕ ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಆದೇಶದಲ್ಲಿ ತಿಳಿಸಿದ್ದಾರೆ.