ನ್ಯೂಸ್ ನಾಟೌಟ್ : ಸರ್ಕಾರ ಪ್ರತಿ ತಿಂಗಳು ಅಂಗನವಾಡಿ ಪೌಷ್ಠಿಕ ಆಹಾರಗಳಾದ ಮೊಟ್ಟೆ, ಶೇಂಗಾ, ಬೆಲ್ಲ ಹಾಗೂ ಇನ್ನಿತರ ಆಹಾರ ಸರಬರಾಜು ಮಾಡುತ್ತಿದೆ. ಈ ಆಹಾರದ ಮೇಲೆಯೂ ಕಣ್ಣು ಹಾಕಿದ ದುಷ್ಕರ್ಮಿಗಳು ಅಂಗನವಾಡಿ ಕೇಂದ್ರದ ಹಂಚು ತೆಗೆದು ಒಳಹೊಕ್ಕಿದ್ದಾರೆ..!ಮಾತ್ರವಲ್ಲ, ಸಾವಿರಾರು ಮೌಲ್ಯದ ಆಹಾರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ..!
ಈ ಘಟನೆ ಬೆಳಕಿಗೆ ಬಂದಿದ್ದು ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರದಲ್ಲಿ.ಎಂದಿನಂತೆ ಶಿಕ್ಷಕಿ ಅಂಗನವಾಡಿಗೆ ಬಂದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.ಕಳೆದ ಕೆಲ ದಿನಗಳ ಹಿಂದೆಯೇ ಅಂಗನವಾಡಿ ಕೇಂದ್ರದ ಮೇಲೆ ಕಣ್ಣಿಟ್ಟಿದ್ದ ಕಳ್ಳರು, ಅ.೧೯ಕ್ಕೆ ಮೂಹೂರ್ತ ಫಿಕ್ಸ್ ಮಾಡಿದ್ದಾರೆ.ರಾತ್ರೋ ರಾತ್ರಿ ಯಾರೂ ಇಲ್ಲದ ವೇಳೆ ಅಂಗನವಾಡಿ ಕೇಂದ್ರದತ್ತ ಹೆಜ್ಜೆ ಹಾಕಿದ್ದಾರೆ.
ಬಳಿಕ ಅಂಗನವಾಡಿಯ ಹಂಚು ತೆಗೆದು ಒಳಹೊಕ್ಕು ಸಾಲಾಗಿ ಇರಿಸಿದ್ದ 9,690 ರೂ. ಮೌಲ್ಯದ ಆಹಾರ ಸಾಮಾಗ್ರಿಯನ್ನು ಹೊತ್ತೊಯ್ದಿದ್ದಾರೆಂದು ತಿಳಿದು ಬಂದಿದೆ.ಮಾರನೇ ದಿನ ಅಂಗನವಾಡಿ ಕಾರ್ಯಕರ್ತೆ ಮೋಹಿನಿಯವರಿಗೆ ಈ ವಿಚಾರ ಗಮನಕ್ಕೆ ಬಂದಿದ್ದು,ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ನೋಡಿ ಒಂದು ಕ್ಷಣ ಶಾಕ್‌ಗೊಳಗಾದರು.ಕೂಡಲೇ ಅವರು ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರಿಗೂ ದೂರು ನೀಡಲಾಗಿದ್ದು,ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.