ನ್ಯೂಸ್ ನಾಟೌಟ್: ಮದ್ಯಪಾನ ಪ್ರಿಯರು ಎಷ್ಟು ರೇಟ್ ಏರಿದರೂ ಸಂಜೆ ಹೊತ್ತಿಗೆ ನೈಂಟಿ ಹಾಕುವುದನ್ನು ಬಿಡೋದಿಲ್ಲ. ಹಾಗೆ ಕಿಕ್ ತೆಗೆದುಕೊಳ್ಳುವ ಮದ್ಯ ಪ್ರಿಯರಿಂದ ಹೆಚ್ಚುವರಿ ಹಣವನ್ನು ಸದ್ದಿಲ್ಲದೆ ವೈನ್ ಶಾಪ್ ಗಳು ಪೀಕಿಸಿ ಕಿಕ್ ಇಳಿಸುತ್ತಿರುವುದರ ಬಗ್ಗೆ ವರದಿಯಾಗಿದೆ.
ಹೌದು, ಈ ಬಗ್ಗೆ ಗ್ರಾಹಕರಿಂದಲೇ ಇದೀಗ ದೂರುಗಳು ಕೇಳಿ ಬರುತ್ತಿವೆ. ಸರ್ಕಾರ MRP ದರವನ್ನು ಇಷ್ಟು ಅಂತ ನಿಗದಿಪಡಿಸಿರುತ್ತವೆ. ಆದರೆ ಸುಳ್ಯ ಸೇರಿದಂತೆ ತಾಲೂಕಿನ ವಿವಿಧ ಕಡೆ ಇದಕ್ಕೆಲ್ಲ ಬೆಲೆಯೇ ಇಲ್ಲದಂತಾಗಿದೆ. MRPಯಲ್ಲಿ ಇರೋದು ಒಂದು, ಈ ವೈನ್ ಶಾಪ್ ನವರು ಗ್ರಾಹಕರಿಂದ ಕೀಳುವುದು ಮತ್ತೊಂದು ದರವಾಗಿದೆ. ಈ ದರದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಗೊಂದಲವನ್ನು ಪರಿಹರಿಸಬೇಕಾಗಿರುವ ಅಬಕಾರಿ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸರ್ಕಾರ ಮದ್ಯದ ಮೇಲೆ MRP ದರವನ್ನು ನಿಗದಿಪಡಿಸಿರುತ್ತದೆ. ಈ ಪ್ರಕಾರವಾಗಿಯೇ ವೈನ್ ಶಾಪ್ ಗಳು ಮದ್ಯ ಮಾರಾಟ ಮಾಡಬೇಕು. ಗ್ರಾಹಕರಿಗೆ ಬಿಲ್ ನೀಡಬೇಕು. ಆದರೆ ಸುಳ್ಯದ ಹಲವು ಕಡೆ ವೈನ್ ಶಾಪ್ ಗಳು MRP ದರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ದುಪ್ಪಟ್ಟು ಹಣವನ್ನು ಗ್ರಾಹಕರಿಂದ ಕೀಳುತ್ತಿವೆ. ಇದರ ರಿಯಾಲಿಟಿ ಚೆಕ್ ಮಾಡಬೇಕು ಅನ್ನುವ ಕಾರಣಕ್ಕೆ ನ್ಯೂಸ್ ನಾಟೌಟ್ ತಂಡ ಫೀಲ್ಡಿಗಿಳಿಯಿತು. ಓಲ್ಡ್ ಮಂಕ್ 90 ಪ್ಯಾಕ್ ಖರೀದಿಸಿತು. ಇದರಲ್ಲಿದ್ದ MRP ದರ 79 ರೂ. ಆದರೆ ವೈನ್ ಶಾಪ್ ನವರು 90 ರೂ. ತೆಗೆದುಕೊಂಡರು. ಈ ವೇಳೆ ಗ್ರಾಹಕರಿಗೆ ಬಿಲ್ ಕೂಡ ನೀಡೋದಿಲ್ಲ. ಕ್ವಾಟರ್ ತೆಗೆದುಕೊಂಡರೆ ಹೆಚ್ಚುವರಿಯಾಗಿ 30 ರೂ. ಕೊಡಬೇಕಾಗುತ್ತದೆ ಎಂದು ಮತ್ತೊಬ್ಬರು ಗ್ರಾಹಕ ನ್ಯೂಸ್ ನಾಟೌಟ್ ಗೆ ತಿಳಿಸಿದರು. ಹಾಗಿದ್ದರೆ ಹೆಚ್ಚುವರಿ ತೆಗೆದುಕೊಳ್ಳುವ ಹಣ ಎಲ್ಲಿಗೆ ಹೋಗುತ್ತದೆ? ಸರ್ಕಾರಕ್ಕೋ ಅಥವಾ ಅಧಿಕಾರಿಗಳ ಕಿಸೆಗೋ..? ಇದರ ಲೆಕ್ಕಾಚಾರವನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಮದ್ಯಪಾನ ಪ್ರಿಯರು ಒತ್ತಾಯಿಸುತ್ತಿದ್ದಾರೆ. ಹೀಗೆ ಜನರಿಂದ ಹಣ ಪೀಕಿಸುವುದು ಒಂದು ಲೆಕ್ಕದಲ್ಲಿ ಹಗಲು ದರೋಡೆ. ಕಾನೂನು ಬಾಹಿರವಾಗಿದೆ. ಇದರ ಮೇಲೆ ಅಬಕಾರಿ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಹೆಚ್ಚುವರಿ ಹಣ ಎಲ್ಲಿಗೆ ಹೋಗುತ್ತಿದೆ. ಏನಾಗುತ್ತಿದೆ..? ಸರ್ಕಾರದಲ್ಲಿ ಈ ಬಗ್ಗೆ ಲೆಕ್ಕ ಇದೆಯಾ..? ಅಥವಾ ಇದು ಯಾರ ಕಿಸೆಯನ್ನು ಸೇರುತ್ತಿದೆ..? ಅನ್ನುವುದರ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಬೇಕಿದೆ. ಇದು ಅಕ್ರಮವಾಗಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ಸಕ್ರಮವಾಗಿದ್ದರೆ ಈ ಬಗ್ಗೆ ಜವಾಬ್ದಾರಿಯುತ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಕೆಲವು ವೈನ್ ಶಾಪ್ ಗಳು ನೀತಿ ನಿಯಮಗಳನ್ನು ನೇರವಾಗಿಯೇ ಗಾಳಿಗೆ ತೂರುತ್ತಿವೆ. ನಿಗದಿತ ಸಮಯಕ್ಕೆ ಮೊದಲೇ ವೈನ್ ಶಾಪ್ ಗಳನ್ನು ತೆರೆದು ಲೂಸ್ ವ್ಯಾಪಾರ ನಡೆಸುತ್ತಿವೆ. ಇದೆಲ್ಲವೂ ರಾಜಾರೋಷವಾಗಿ ನಡೆಯುತ್ತಿದೆ. ಇದೆಲ್ಲದಕ್ಕೂ ಕಡಿವಾಣವನ್ನು ಅಬಕಾರಿ ಇಲಾಖೆ ಹಾಕಲೇಬೇಕಿದೆ. ಜನರನ್ನು ಸುಲಿಗೆ ಮಾಡುವ ವೈನ್ ಶಾಪ್ ಗಳಿಗೆ ದಂಡ ವಿಧಿಸಿದರೆ ತನ್ನಿಂದ ತಾನೆ ಎಲ್ಲವೂ ಸರಿಯಾಗಬಹುದು ಎಂದು ಗ್ರಾಹಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.