ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾರ್ಯ ನಿರತ ಮಾಧ್ಯಮ ವರದಿಗಾರರ ಮೇಲೆ ಕೊಲೆ ಬೆದರಿಕೆ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಸುಳ್ಯದ ಸ್ಥಳೀಯ ಪತ್ರಿಕೆಯ ವರದಿಗಾರನಿಗೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಆರೋಪ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಿಥುನ್ ಕರ್ಲಪ್ಪಾಡಿ ಎಂಬುವವರು ಕಳೆದ ಕೆಲವು ವರ್ಷಗಳಿಂದ ಸುಳ್ಯದ ಸ್ಥಳೀಯ ಪತ್ರಿಕೆ ಅಮರ ಸುದ್ದಿ ಎಂಬ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸುಳ್ಯದ ಬಿಎಸ್ ಎನ್ ಎಲ್ ಕಸ್ಟಮರ್ ಸರ್ವೀಸ್ ಸೆಂಟರ್ ಗ್ರಾಹಕರಿಂದ ಬಿಎಸ್ ಎನ್ ಎಲ್ ಸಿಮ್ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವುದರ ಬಗ್ಗೆ ಇತ್ತೀಚೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರನ್ನು ವರದಿಗಾರ ಮಿಥುನ್ ಕರ್ಲಪ್ಪಾಡಿಯೇ ನೀಡಿದ್ದಾರೆಂದು ಭಾವಿಸಿ ಮಿಥುನ್ ಅವರ ಮಾವನ ಮೊಬೈಲ್ ಗೆ ಕರೆ ಮಾಡಿ ಸುಳ್ಯ ಬಿಎಸ್ಎನ್ ಎಲ್ ಗುತ್ತಿಗೆ ನೌಕರ ಕಸ್ಟಮರ್ ಸರ್ವಿಸ್ ಸೆಂಟರ್‌ನ ವಿಕಾಸ್ ಮೀನಗದ್ದೆ ಅನ್ನುವ ವ್ಯಕ್ತಿ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲ ಡಿ.14ರಂದು ಮಿಥುನ್ ಅವರ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಮಿಥುನ್ ತಿಳಿಸಿದ್ದಾರೆ. ಮಾತ್ರವಲ್ಲ ಬಿಎಸ್ ಎನ್ ಎಲ್ ಹಿರಿಯ ಅಧಿಕಾರಿಗಳಿಗೂ ಮಿಥುನ್ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ವಿಚಾರವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Click