ಕರಾವಳಿ

ಆಗಸ್ಟ್‌ 8ರಂದು ಸೌಜನ್ಯಳಿಗೆ ನ್ಯಾಯಕ್ಕಾಗಿ ಸುಳ್ಯದಲ್ಲಿ ಬೃಹತ್ ಜಾಥಾ, ಸಾವಿರಾರು ಜನ ಸೇರುವ ನಿರೀಕ್ಷೆ, ಮಹೇಶ್ ತಿಮರೋಡಿ ಭಾಷಣಕ್ಕೆ ವೇದಿಕೆ ಸಿದ್ಧತೆ

ನ್ಯೂಸ್ ನಾಟೌಟ್: ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿವಂಗತ ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿ ತಿಳಿಸಿದೆ.

ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ವಸಂತ್ ಅವರು, ಸೌಜನ್ಯಳ ಹತ್ಯೆ ನಡೆದು ೧೧ ವರ್ಷವಾಗಿದೆ. ನಿರಪರಾಧಿಯನ್ನು ಅಪರಾಧಿ ಮಾಡಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯದ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಿದೆ. ಈ ಕೂಡಲೇ ಸೌಜನ್ಯ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಸೌಜನ್ಯ ನ್ಯಾಯದ ಹೋರಾಟದಲ್ಲಿ ನಾವೆಲ್ಲರು ಪಕ್ಷಾತೀತ, ಜ್ಯಾತ್ಯಾತೀತ, ಧರ್ಮಾತೀತವಾಗಿ ನಿಂತಿದ್ದೇವೆ, ಯಾವುದೇ ಧಾರ್ಮಿಕ ಕ್ಷೇತ್ರದ ವಿರುದ್ಧ ನಮ್ಮ ಹೋರಾಟವಲ್ಲ. ನಾವು ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವುದಷ್ಟೇ ನಮ್ಮ ಒತ್ತಾಯ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಅವರು, ಆಗಸ್ಟ್‌ ೮ರಂದು ಮಹೇಶ್ ಶಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಸೇರಿಸಿಕೊಂಡು ಬೆಳಗ್ಗೆ ೯ ಗಂಟೆಗೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾ ನಡೆಯಲಿದೆ. ಸುಮಾರು ೫೦೦ಕ್ಕೂ ಹೆಚ್ಚು ಬೈಕ್, ಕಾರು ವಾಹನಗಳು ಜಾಥಾದಲ್ಲಿ ಪಾಲ್ಗೊಳ್ಳಲಿವೆ. ಸುಳ್ಯ ಪೇಟೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ನ್ಯಾಯಪರ ಹೋರಾಟಗಾರರು ಸಂಘಟಿತರಾಗಲಿದ್ದಾರೆ.

ಪೈಚಾರಿನಿಂದ ಕಾಲ್ನಡಿಗೆ ಜಾಥಾ ನಡೆಯಲಿದೆ. ನಂತರ ಹಳೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಭಾಷಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸರಸ್ವತಿ ಕಾಮತ್‌, ಅಜಿತ್ ಗೌಡ ಐವರ್ನಾಡು, ಲೋಲಜಾಕ್ಷ, ಜಯ ಲಕ್ಷ್ಮೀ, ಭರತ್‌, ವಿಶ್ವನಾಥ್ ಅರೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

Related posts

ಗಂಡನನ್ನು ಕೊಂದು 22 ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟ ಹೆಂಡತಿ, ಮಗ

30 ವರ್ಷ ಆಗದ ಕಾರ್ಕಳದ ಅಭಿವೃದ್ದಿ ಈಗ ಆಗಿದೆ, ಈ ಬಾರಿ ಸುನೀಲ್ ಕುಮಾರ್ ಬಂದರೆ ಸ್ವರ್ಣ ಕಾರ್ಕಳದ ಕನಸು ನನಸಾಗಲಿದೆ ಎಂದ ಬಿಜೆಪಿ ಮೋರ್ಚಾ ಉಪಾಧ್ಯಕ್ಷ ಸರ್ವಜ್ಞ ತಂತ್ರಿ

ಕಿಡ್ನಾಪ್ ಕೇಸ್ ಅನ್ನು ನಾಪತ್ತೆ ಎಂದು ದಾಖಲಿಸಿದರೇ ಪೊಲೀಸರು?