ಕರಾವಳಿಕ್ರೈಂ

ಸಂಪಾಜೆಯ ನಿವೃತ್ತ ಪ್ರಾಂಶುಪಾಲರ ಮನೆಯಿಂದ ಚಿನ್ನಾಭರಣ ಕಳ್ಳತನ ಪ್ರಕರಣ: ಕದ್ದ ಮಾಲು ಮೂರು ಕಡೆ ಮಾರಾಟ, ಕೊನೆಗೆ ಕಳ್ಳ ಸಿಕ್ಕಿಬಿದ್ದಿದ್ದೆಲ್ಲಿ..?

118

ನ್ಯೂಸ್ ನಾಟೌಟ್: ಸಂಪಾಜೆಯ ನಿವೃತ್ತ ಪ್ರಾಂಶುಪಾಲೆ ಮಾಲತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯ ಅವರ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದೊಂದು ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿತ್ತು. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆದು ಇದೀಗ ಕೇರಳದ ಕಾಸರಗೋಡಿನ ಹಾಶಿಂ ( 43 ವರ್ಷ) ಎನ್ನುವವನ್ನು ಬಂಧಿಸಲಾಗಿದೆ. ಸದ್ಯ ಈತನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಇದೀಗ ಸುಳ್ಯ ಪೊಲೀಸ್ ಠಾಣೆಗೆ ಆತನನ್ನು ಹೆಚ್ಚಿನ ವಿಚಾರಣೆಗೆ ವಾಪಸ್ ಕರೆದುಕೊಂಡು ಬರಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಇಂಟ್ರೆಸ್ಟಿಂಗ್ ವಿಚಾರ ಹೊರಬಿದ್ದಿದೆ. ಈತ ಚಿನ್ನಾಭರಣವನ್ನು ದೋಚಿ ಅದನ್ನು ಮೂರು ಕಡೆಗೆ ಮಾರಿದ್ದಾನೆ ಎನ್ನಲಾಗಿದೆ. ಅದೇ ರೀತಿಯಾಗಿ ಜಾಲ್ಸೂರಿನಲ್ಲಿ ಮಾರುವಾಗ ಆತನನ್ನು ಹಿಡಿಯಲಾಯಿತು ಎಂದು ತಿಳಿದು ಬಂದಿದೆ. ಮೂರು ಕಡೆಯಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದರಿಂದ ಎಷ್ಟು ಸಿಕ್ಕಿದೆ ಅನ್ನುವುದು ಇನ್ನೂ ಪೊಲೀಸರಿಗೆ ಅಂದಾಜು ಆಗಿಲ್ಲ ಎನ್ನಲಾಗಿದೆ.

ಸುಳ್ಯದ ಜಟ್ಟಿಪಳ್ಳದಲ್ಲಿರುವ ಬೋರುಗುಡ್ಡೆಯಲ್ಲಿರುವ ಮಾಲತಿ-ಮೋಹನದಾದ್ ಮನೆಯಲ್ಲಿ ಅಕ್ಟೋಬರ್ 20ರಂದು ರಾತ್ರಿ ಕಳ್ಳತನ ನಡೆದಿತ್ತು. ಬ್ಯಾಂಕ್ ಉದ್ಯೋಗಿಯಾಗಿದ್ದ ಮೋಹನ್ ದಾಸ್ ಮುದ್ಯ ಅವರು ಪತ್ನಿ ಮಾಲತಿಯವರ ಜೊತೆಗೂಡಿ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದು ಹಾಸನದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಇತ್ತ ಕಳ್ಳ ಸುಳ್ಯದಲ್ಲಿರುವ ಮನೆಯೊಳಗೆ ನುಗ್ಗಿ ತನ್ನ ಕೈಚಳಕ ತೋರಿಸಿದ್ದಾನೆ. ಮನೆಗೆ ಮರಳಿ ಬಂದಾಗ ಮನೆಯಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಬಂಗಾರದ ಗಂಟನ್ನು ಕಳ್ಳ ತೆಗೆದುಕೊಂಡು ಹೋಗಿದ್ದ.

ದಂಪತಿ ಮನೆಗೆ ತಲುಪುವ ಮೊದಲೇ ಮನೆಯ ಬಾಗಿಲು ಮುರಿದು ಯಾರೋ ಒಳ ನುಗ್ಗಿದ್ದಾರೆ ಅನ್ನುವ ವಿಚಾರದ ಬಗ್ಗೆ ಮನೆಯ ಮಹಡಿಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾತ್ರಿಯೇ ಮಂಗಳೂರಿನಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿ ತಪಾಸಣೆ ಮಾಡಲಾಗಿತ್ತು. ಇದೀಗ ಬರೋಬ್ಬರಿ ಒಂದು ತಿಂಗಳ ಬಳಿಕ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ಯಾರದರೂ ಇದ್ದಾರೆಯೇ ಅನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಸುಳ್ಯದಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿವೆ. ಇದರಲ್ಲಿ ಈತ ಮತ್ತು ಈತನ ಗ್ಯಾಂಗ್ ನ ಪಾಲುದಾರಿಕೆ ಇದೆಯೇ ಅನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸದ್ಯ ಸುಳ್ಯ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

https://www.youtube.com/watch?v=bBQDqvFzGGU
See also  ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ಸಾವು..! ಫಲಿಸದ ಚಿಕಿತ್ಸೆ
  Ad Widget   Ad Widget   Ad Widget   Ad Widget   Ad Widget   Ad Widget