ನ್ಯೂಸ್ ನಾಟೌಟ್: ಕುಡಿದು ವಾಹನ ಚಲಾಯಿಸಿದ್ದಲ್ಲದೆ ಪೊಲೀಸ್ ಅಧಿಕಾರಿಯ ಜೊತೆ ಪೆದಂಬು ಮಾತನಾಡಿ ದಾಖಲಾತಿಗಳನ್ನು ಹಾಜರುಪಡಿಸದೆ ಉದ್ದಟತನದಿಂದ ವರ್ತಿಸಿದ ವ್ಯಕ್ತಿಗೆ ಸುಳ್ಯ ನ್ಯಾಯಾಲಯ 10,೦೦೦ ರೂ. ದಂಡ ಹಾಗೂ ಸಮುದಾಯ ಸೇವೆಯ ಶಿಕ್ಷೆಯನ್ನು ಆದೇಶಿಸಿದೆ.ಈ ಪ್ರಕಾರವಾಗಿ ಆತ ದಂಡ ಕಟ್ಟುವುದಲ್ಲದೆ ಜು.19 ರಿಂದ ಜು.28ರ ತನಕ ಪ್ರತಿ ನಿತ್ಯ ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನುಅನುಭವಿಸಬೇಕಿದೆ.
ಏನಿದು ಘಟನೆ..?
ಆರೋಪಿ ಅಂಕಿತ್ ಪಲಾಯ ಏ.22ರಂದು ರಾತ್ರಿ 9.30ಕ್ಕೆ ಕೆವಿಜಿ ಜಂಕ್ಷನ್ ಬಳಿ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ವಾಹನದ ದಾಖಲಾತಿಗಳನ್ನು ಹಾಜರುಪಡಿಸದೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸರು ಕಲಂ 185 ಮತ್ತು 179 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ದಾಖಲಿಸಿದ್ದರು. ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಹಿರಿಯ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಬುರವರು ದಂಡ ಹಾಗೂ ಸಮುದಾಯ ಶಿಕ್ಷೆಯನ್ನು ಆದೇಶಿಸಿದ್ದಾರೆ. ಮಾತ್ರವಲ್ಲ ಕಲಂ 179ರ ಅಪರಾದಕ್ಕಾಗಿ 2 ಸಾವಿರ ರೂ. ದಂಡ ವಿಧಿಸಿದ್ದಾರೆ.