ಸುಳ್ಯ: ಇಲ್ಲಿನ ಜಟ್ಟಿಪಳ್ಳ ಕಾನತ್ತಿಲ ರಸ್ತೆ ತಿರುವಿನಲ್ಲಿ ಮಾರುತಿ ಅಪಾರ್ಟ್ ಮೆಂಟ್ ಎದುರು ಅಕ್ರಮವಾಗಿ ಓಮ್ನಿ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಎರಡು ದನಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸುಳ್ಯ ಎಸ್. ಐ.ಯವರು ಕಾರನ್ನು ತಡೆಗಟ್ಟಿ ಓರ್ವ ಆರೋಪಿಯನ್ನು ವಶ ಪಡಿಸಿಕೊಂಡ ಘಟನೆ ಸೆ. 12 ರಂದು ರಾತ್ರಿ ವರದಿಯಾಗಿದೆ.
ಮೂರು ಮಂದಿ ಆರೋಪಿಗಳು ಕಾರಿನಲ್ಲಿ ದನಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಕಾರನ್ನು ಅಡ್ಡ ಗಟ್ಟಿ ನಿಲ್ಲಿಸಲು ಸೂಚನೆ ನೀಡುವ ಸಂದರ್ಭ ಚಾಲಕನು ಕಾರನ್ನು ತಿರುಗಿಸಿ ಮತ್ತೆ ಕಾನತ್ತಿಲ ಕಡೆಗೆ ಹೋಗಲು ಯತ್ನಿಸಿದಾಗ ಮಾರುತಿ ಅಪಾರ್ಟ್ ಮೆಂಟ್ ನ ಕಂಪೌಂಡಿಗೆ ಡಿಕ್ಕಿ ಹೊಡೆಯಿತು. ಚಾಲಕ ಕಾರಿನಿಂದಿಳಿದು ಪರಾರಿಯಾದಾಗ ಕಾರು ಹಿಂಬದಿ ಚಲಿಸಿ ಗೋಡೆಗೆ ತಾಗಿ ನಿಂತಿತು.ಅಷ್ಟರಲ್ಲಿ ಅಲ್ಲಿ ಜಮಾಯಿಸಿದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಮೂವರಲ್ಲಿ ಇಬ್ಬರು ಪರಾರಿಯಾಗಿ ಒಬ್ಬ ಆರೋಪಿಯನ್ನು ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಭಜರಂಗದಳ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿದ್ದರು. ಓಮ್ನಿ ಕಾರನ್ನು ಜಾನುವಾರು ಸಮೇತ ಪೋಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.