ನ್ಯೂಸ್ ನಾಟೌಟ್: ಸುಳ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ನೌಕರ ಎಂದು ನಂಬಿಸಿ ಅಜ್ಜನಿಂದ ವ್ಯಕ್ತಿಯೊಬ್ಬ 7 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಇಂದು (ಬುಧವಾರ- ಜು.26) ಬೆಳಗ್ಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಪಂಪ್ ಸಮೀಪ ವೃದ್ದರೊಬ್ಬರು ನಿಂತಿರುತ್ತಾರೆ. ಅವರ ಬಳಿ ಬಂದ ವ್ಯಕ್ತಿಯೊಬ್ಬ ನಾನು ನಿಮ್ಮ ಪರಿಚಯದ ವ್ಯಕ್ತಿ ಎಂದು ತನ್ನ ಗುರುತನ್ನು ಹೇಳಿಕೊಂಡಿದ್ದಾನೆ. ಅಜ್ಜನಿಗೆ ಆತ ಯಾರು ಅನ್ನುವುದು ಗೊತ್ತೇ ಆಗಿರಲಿಲ್ಲ. ಹೀಗಾಗಿ ದೂರದ ಸಂಬಂಧಿಗಳ ಪರಿಚಯ ಹೇಳಿ ನಂಬಿಸಿದ್ದಾನೆ. ನಾನು ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಾನೆ.
ಅಜ್ಜ ಸಂಪೂರ್ಣವಾಗಿ ವ್ಯಕ್ತಿಯ ಮಾತನ್ನು ನಂಬುತ್ತಾರೆ. ಈ ವೇಳೆ ಅವಕಾಶ ಬಳಸಿ ನನಗೆ ನೀವು ಈಗ 7 ಸಾವಿರ ರೂ. ಕೊಡಬೇಕು. ನೀವು ಒಂದು ಸ್ಟ್ಯಾಂಪ್ ಪೇಪರ್ ಮಾಡಿಸಿಕೊಂಡು ಬಂದು ಅದನ್ನು ಬ್ಯಾಂಕ್ ನಲ್ಲಿ ಕೊಡಿ ಅವರು ನಿಮಗೆ ಚೆಕ್ ಕೊಡುತ್ತಾರೆ ಎಂದು ಹೇಳುತ್ತಾನೆ.
ಇದನ್ನು ನಂಬಿದ ಅಜ್ಜ ಹತ್ತಿರದಲ್ಲಿ ಇದ್ದ ವೈನ್ ಶಾಪ್ ಗೆ ಹೋಗಿ ಅಲ್ಲಿ ತಮ್ಮ ಪರಿಚಯ ಇರುವ ವ್ಯಕ್ತಿಯಿಂದ 7 ಸಾವಿರ ರೂ. ತೆಗೆದುಕೊಡುತ್ತಾರೆ. ನಂತರ ಅದನ್ನು ತೆಗೆದುಕೊಂಡು ಮತ್ತೆ ಸಿಗುತ್ತೇನೆ ಎಂದು ಹೇಳಿ ವ್ಯಕ್ತಿ ಅಲ್ಲಿ ತೆರಳುತ್ತಾನೆ. ಇತ್ತ ಅಜ್ಜ ಸ್ಟ್ಯಾಂಪ್ ಪೇಪರ್ ರೆಡಿ ಮಾಡಿಸಿಕೊಂಡು ಬ್ಯಾಂಕ್ ಗೆ ಬರುತ್ತಾರೆ. ವ್ಯಕ್ತಿಯ ಬಗ್ಗೆ ಕೇಳಿದಾಗ ಅಂತಹ ವ್ಯಕ್ತಿಯೇ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ ಅನ್ನುವ ಉತ್ತರ ಬರುತ್ತದೆ. ಅಜ್ಜನಿಗೆ ಒಂದು ಕ್ಷಣ ಯಾಮಾರಿದ ಅನುಭವ ಆಗುತ್ತದೆ. ನಂತರ ಅಜ್ಜ ನಡೆದ ವಿಚಾರವನ್ನೆಲ್ಲ ಪರಿಚಿತರೊಂದಿಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ.
ಕಳೆದೊಂದು ವಾರದಲ್ಲಿ ಸುಳ್ಯದಲ್ಲಿ ನಡೆದಿರುವ ಎರಡನೇ ವಂಚನೆ ಪ್ರಕರಣವಾಗಿದೆ. ಎರಡು ಪ್ರಕರಣಗಳು ಕೂಡ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಪೆಟ್ರೋಲ್ ಪಂಪ್ ಬಳಿಯೇ ನಡೆದಿರುವುದು ವಿಶೇಷವಾಗಿದೆ. ವಾರದ ಹಿಂದೆ ಖಾಸಗಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಬಾಡಿಗೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಅವರಿಂದ ಮುಂಗಡ ಹಣ ಪಡೆದು ಬೆಂಗಳೂರಿಗೆ ಹೊರಟಿದ್ದ ಸುಳ್ಯದ ವಾಹನಗಳಿಗೆ ಡಿಸೇಲ್ ತುಂಬಿ ಆ ಹಣವನ್ನೂ ಕೊಡದೆ ಈಗ ಬರುತ್ತೇನೆಂದು ಹೇಳಿ ಎಸ್ಕೇಪ್ ಆಗಿದ್ದ. ಈತ ಗಂಟೆಗಟ್ಟಲೆಯಾದರೂ ಬರಲಿಲ್ಲ ಎಂದು ಹುಡುಕಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿತ್ತು.