ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಮಂಗಳವಾರ ತಡರಾತ್ರಿ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯ ಎರಡು ಅಂಗಡಿಗಳಿಗೆ ಕಳ್ಳರ ತಂಡ ನುಗ್ಗಿ ಕನ್ನ ಹಾಕಿದೆ. ಸಾವಿರಾರು ರೂ. ಮೌಲ್ಯದ ಹಣ, ವಸ್ತುಗಳನ್ನು ದೋಚಿ ಕತ್ತಲಲ್ಲಿ ಪರಾರಿಯಾಗಿದೆ ಎಂದು ವರದಿಯಾಗಿದೆ.

ಅರಂಬೂರಿನ ಕಲ್ಚರ್ಪೆ ಬಳಿಯಲ್ಲಿರುವ ಅನಾಸ್ ಮಾಲಿಕತ್ವದ ಸಿ.ಎಂ ಕ್ಯಾಂಟೀನ್ ಗೆ ನುಗ್ಗಿ 7,000 ರೂ. ಮೌಲ್ಯದ ಸಿಗರೇಟ್ ಪ್ಯಾಕ್ ಹಾಗೂ 10,000 ನಗದು ದೋಚಿದ್ದಾರೆ. ಮಾತ್ರವಲ್ಲ,ಅರಂಬೂರಿನ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಅಬ್ದುಲ್ ಕುಂಜಿ ಮಾಲಿಕತ್ವದ ಸಲ್ಮಾ ಚಿಕನ್ ಸೆಂಟರಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಡ್ರಾವರ್ ನಲ್ಲಿದ್ದ 4 ಸಾವಿರ ನಗದು ಕದ್ದೊಯ್ದಿದ್ದಾರೆ. ಹಲವಾರು ದಾಖಲೆಗಳು, ಪಾನ್ ಕಾರ್ಡ್, ಆಧಾರ್ ಕಾರ್ಡ್ ಕೂಡ ಕಳವಾಗಿವೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.