Latestಸುಳ್ಯ

ಸುಳ್ಯ: ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ; ವೆಬ್‌ಸೈಟ್ ಅನಾವರಣ, ಗೋಪೂಜೆ ಮತ್ತು ಗೋವುಗಳ ಹಸ್ತಾಂತರ ಕಾರ್ಯಕ್ರಮ

272

ನ್ಯೂಸ್ ನಾಟೌಟ್: ಸುಳ್ಯ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಮತ್ತು ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ವೆಬ್‌ಸೈಟ್‌ ಅನಾವರಣ, ಗೋಪೂಜೆ ಮತ್ತು ಗೋವುಗಳ ಸಂರಕ್ಷಣಾ ಕಾರ್ಯಕ್ರಮ ಮೇ 25ರಂದು ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರು ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು “ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಇನ್ನಿತರ ತಳಿಗಳ ಸಂರಕ್ಷಣೆಗೆ ವ್ಯವಸ್ಥೆಗಳು ಆಗಬೇಕಾಗಿದೆ.ಮಲೆನಾಡು ಗಿಡ್ಡ ದೇಶೀಯ ತಳಿ ಹಸುವಿನ ಹಾಲು ಅಮೃತಕ್ಕೆ ಸಮಾನ.ಮಲೆನಾಡು ಗಿಡ್ಡ ಸಂರಕ್ಷಣೆಯಾಗಬೇಕೆಂದರೆ ಮನೆಯಲ್ಲಿ ಒಂದು ಅಥವಾ ಎರಡು ದನ ಇರಬೇಕು ಎಂಬ ಸಂಕಲ್ಪ ಮಾಡಬೇಕಾಗಿದೆ. ಮಾನಸಿಕ ನೆಮ್ಮದಿ ಸೇರಿದಂತೆ ಆರೋಗ್ಯದ ದೃಷ್ಟಿಯಿಂದಲೂ ಪ್ರತಿ ಮನೆಯಲ್ಲಿಯೂ ಒಂದು ಮಲೆನಾಡು ಗಿಡ್ಡ ದನವನ್ನು ಸಾಕಿ ಬೆಳೆಸಬೇಕಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಕರೆ ನೀಡಿದರು.

ನಮ್ಮ ಸಂಸ್ಕೃತಿ ಮತ್ತು ಹಳೆಯ ಜೀವನ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶೀಯ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ಸಾಕು ಪ್ರಾಣಿಗಳನ್ನು ಯಾವ ರೀತಿ ಸಾಕುತ್ತೆವೆಯೋ ಆ ಪಟ್ಟಿಗೆ ಮಲೆನಾಡು ಗಿಡ್ಡವನ್ನೂ ಪ್ರತಿ ಮನೆಯಲ್ಲಿ ಪ್ರೀತಿಯಿಂದ ಬೆಳೆಸುವಂತಾಗಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಂಡು ಪ್ರತಿಯೊಬ್ಬರೂ ದೇಶಿಯ ಗೋ ತಳಿಗಳನ್ನು ಸಂರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಲಿ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಸಂಘಟಕ ಅಕ್ಷಯ್ ಆಳ್ವ “ರೈತರಿಗೆ ನಾವು ಮಲೆನಾಡು ಗಿಡ್ಡ ವಿತರಿಸಿದೆವು.ಬರಡು ಭೂಮಿಗಳಲ್ಲಿ ಈಗ ಕೃಷಿಯನ್ನು ಆರಂಭಿಸಲು ಶುರು ಮಾಡಿದರು.ಇದೀಗ ಕಳೆದ ಮೂರು ವರ್ಷದಲ್ಲಿಯೇ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯವಾಗಿದೆ. ಈಗಾಗ್ಲೇ ಸಾವಯವ ಕೃಷಿಕರಿಗೆ 2500 ಕ್ಕೂ ಅಧಿಕ ಮಲೆನಾಡು ಗಿಡ್ಡ ಒಂದು ಗಂಡು ಮತ್ತು ಒಂದು ಹೆಣ್ಣು ಕರುಗಳನ್ನು ವಿತರಿಸಿದ್ದೇವೆ ಎಂದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ‌.‌ ವೆಬ್‌ಸೈಟ್ ಲೋಕಾರ್ಪಣೆ ಗೊಳಿಸಿದರು.ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಅಧ್ಯಕ್ಷ ಸದಾಶಿವ ಭಟ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್‌ಡಿಆರ್ ಐ(ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆ) ಬೆಂಗಳೂರು ಇದರ ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್, ಮಾಜಿ ಸಚಿವ ಎಸ್. ಅಂಗಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿಕೆವಿಕೆ ಬೆಂಗಳೂರು ಇಲ್ಲಿನ ವಿಶ್ರಾಂತ ಉಪಕುಲಪತಿ ಡಾ.ವಿಶ್ವನಾಥ್,ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ ಉಪಸ್ಥಿತರಿದ್ದರು. ದೀಪ್ತಿ, ವೈಶಾಲಿ ಹಾಗೂ ಪ್ರಸನ್ನ ಪ್ರಾರ್ಥಿಸಿದರು. ಕೆವಿಜಿ ಆಯುರ್ವೇದ ಕಾಲೇಜಿನ ಉಪನ್ಯಾಸಕಿ ಡಾ.ಹರ್ಷಿತಾ ಪುರುಷೋತ್ತಮ ಸ್ವಾಗತಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

See also  ದ.ಕ. ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು..!ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರ?ಏನಿದು ಗೌಪ್ಯ ಸಭೆ?

ಇದಾದ ಬಳಿಕ ವಿಚಾರಗೋಷ್ಠಿ ನಡೆಯಿತು. ಎನ್‌ಡಿಆರ್ ಐ(ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆ) ಬೆಂಗಳೂರು ಇದರ ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್ ಹಾಗೂ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ ಅವರು ಮಲೆನಾಡು ಗಿಡ್ಡ ತಳಿಯ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ, ಗೋ ಪೂಜೆ, ಗೋವುಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಗೌವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ‌ ಮಾಡಲಾಗಿತ್ತು.

  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget