ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮಾನವೀಯತೆಯೇ ಮರೆತು ಹೋಗುವ ದಿನಗಳು. ಯಾರಿಗೇನಾದರೂ ನನಗೇನು ಅನ್ನುವಂತಹ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿರುವ ಸ್ವಾರ್ಥಿ ಸಮಾಜದಲ್ಲಿ ಕೆಎಸ್ಆರ್ ಟಿಸಿ ಬಸ್ ಚಾಲಕರೊಬ್ಬರು ಹೃದಯ ವೈಶಾಲ್ಯತೆ ಮೆರೆದು ಸುದ್ದಿಯಾಗಿದ್ದಾರೆ.
ಇಂದು (ಆ.3) ರಂದು ಮಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವೇಗದೂತ ಬಸ್ ನಲ್ಲಿ ಪ್ರಯಾಣಿಕರಾಗಿದ್ದ ಮೈಸೂರು ಮೂಲದ ಶೋಭಾ (40 ವರ್ಷ) ಬಸ್ ನಲ್ಲಿ ಸುಳ್ಯ ತಲುಪುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ತಡಮಾಡದೆ ಕೆಎಸ್ ಆರ್ ಟಿಸಿ ಚಾಲಕ ನೇರವಾಗಿ ಬಸ್ ಅನ್ನು ಕುರುಂಜಿ ಭಾಗ್ ನತ್ತ ತಿರುಗಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ನೇರವಾಗಿ ಕೆವಿಜಿ ಕ್ಯಾಂಪಸ್ ಪ್ರವೇಶಿಸಿದೆ. ತಕ್ಷಣ ಕೆವಿಜಿ ಆಂಬ್ಯುಲೆನ್ಸ್ ಚಾಲಕ ಹನೀಫ್ ಮತ್ತಿತರರು ಸ್ಥಳಕ್ಕೆ ಬಂದು ಪ್ರಜ್ಷೆ ತಪ್ಪಿದ್ದ ಮಹಿಳೆಯನ್ನು ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಲು ನೆರವಾದರು.
View this post on Instagram
ಕೆವಿಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಮಹಿಳೆಯನ್ನು ತಂದು ಚಿಕಿತ್ಸೆಗೆ ಒಳಪಡಿಸಿದ ಬಳಿಕ ಚಾಲಕ ಅಲ್ಲಿಂದ ಬಸ್ ನೊಂದಿಗೆ ವಾಪಸ್ ಮೈಸೂರಿನತ್ತ ತೆರಳಿದ್ದಾರೆ. ಕೆವಿಜಿ ಆಸ್ಪತ್ರೆಯ ತುರ್ತ ನಿಗಾ ಘಟಕದತ್ತ ಬಸ್ ಬಂದು ನಿಂತಿದ್ದು ಹಲವರಿಗೆ ಅಚ್ಚರಿಗೆ ಕಾರಣವಾಯಿತು. ಈ ಹಂತದಲ್ಲಿ ಸಮಯ ಪ್ರಜ್ಞೆ ಮೆರೆದ ಚಾಲಕ, ಕಂಡೆಕ್ಟರ್ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಸದ್ಯ ಶೋಭಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.