ನ್ಯೂಸ್ ನಾಟೌಟ್: ಅಕ್ರಮವಾಗಿ ಜಮೀನಿಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಗಂಡ-ಹೆಂಡತಿಗೆ ಬೆದರಿಕೆಯೊಡ್ಡಿದ್ದಲ್ಲದೆ 120 ಮೀ. ವಿದ್ಯುತ್ ಕೇಬಲ್ ಹೊತ್ತೊಯ್ದ ದೂರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಐವರ್ನಾಡು ಗ್ರಾಮದ ಸುಳ್ಯ ನಿವಾಸಿ ಅಪೂರ್ವ (35 ವರ್ಷ) ಮಾ.1ರಂದು ಬೆಳಗ್ಗೆ ಅವರ ಗಂಡನೊಂದಿಗೆ ಐವರ್ನಾಡು ಗ್ರಾಮದ ಆರಿಕಲ್ಲು ಎಂಬಲ್ಲಿರುವ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸುವುದಕ್ಕೆಂದು ಹೋಗಿರುತ್ತಾರೆ. ಈ ಸಮಯದಲ್ಲಿ ಆರೋಪಿತರಾದ ಚಂದ್ರಶೇಖರ ಹಾಗೂ ಕುಸುಮಾಧರ ಎಂಬ ವ್ಯಕ್ತಿಗಳು ಜಮೀನಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಪಂಪ್ ಶೆಡ್ ನಿಂದ ಬೋರ್ ವೆಲ್ ಗೆ ಹಾಕಿರುವ ಕೇಬಲ್ ಗಳನ್ನು ತೆಗೆದು ಹಾಕಿದ್ದಾರೆ. ಇದೇ ವೇಳೆ ಅವರಿಬ್ಬರು ಅಪೂರ್ವ ಹಾಗೂ ಅವರ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದಾರೆ. ಮಾತ್ರವಲ್ಲ ಅಂದಾಜು 120 ಮೀಟರ್ ವಿದ್ಯುತ್ ಕೇಬಲ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕೇಬಲ್ ಅಂದಾಜು ಮೌಲ್ಯ ರೂ 9000/- ಅಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅಪೂರ್ವ ದೂರು ನೀಡಿದ್ದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:24/2024, ಕಲಂ: 447, 506, 504,379 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.