ನ್ಯೂಸ್ ನಾಟೌಟ್: ಮುಂದಿನ 5 ದಿನದಲ್ಲಿ ‘ಹೊರಗುತ್ತಿಗೆ ನೌಕರರ ವೇತನ ಪಾವತಿ ಮಾಡುವುದಾಗಿ ಸುಳ್ಯ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರ ಕೆ.ವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದ ಹೊರಗುತ್ತಿಗೆ ನೌಕರರ ವೇತನ ಪಾವತಿ ವಿಚಾರ ಸುಖಾಂತ್ಯದತ್ತ ಬಂದಿದೆ.
ಏನಿದೆ ಪ್ರಕಟಣೆಯಲ್ಲಿ..?
ಚಂದ್ರ ಕೂಟೇಲು, ಶಹೀದ್ ಪಾರೆ, ಅಬ್ದುಲ್ ರಜಾಕ್, ರಾಧಾಕೃಷ್ಣ ಪರಿವಾರಕಾನ ನೇತೃತ್ವದ ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿ ಹೊರಗುತ್ತಿಗೆ ಸಿಬ್ಬಂದಿ ವೇತನ ಬಿಡುಗಡೆಗಾಗಿ ಪ್ರಯತ್ನ ನಡೆಸಿದೆ. ಆದರೆ ಸಿಬ್ಬಂದಿ 6-6-2025ರಂದು ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ರಕ್ಷಾ ಸಮಿತಿಯನ್ನು ಸಂಪರ್ಕಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ 9-6-2025ರಂದು ರಕ್ಷಾ ಸಮಿತಿ ತುರ್ತು ಸಾಮಾನ್ಯ ಸಭೆ ನಡೆಸಿ ಕೆಲವೊಂದು ನಿರ್ಧಾರವನ್ನು ತೆಗೆದುಕೊಂಡಿದೆ.
ಏನಿದು ನಿರ್ಧಾರ..?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸೂಚನೆಯಂತೆ ಮಾರ್ಚ್ ತಿಂಗಳ ವೇತನ ಬಿಡುಗಡೆಯಾಗಿದೆ. ವೈದ್ಯಕೀಯ ಸಹ ನಿರ್ದೇಶಕರ ಸಹಿಯಾದಲ್ಲಿ ಮುಂದಿನ 5-6 ದಿನದಲ್ಲಿ ಮೇ ವರೆಗಿನ ವೇತನ ಪಾವತಿಯಾಗಲಿದೆ. ರೋಗಿಗಳ ಹಿತದೃಷ್ಟಿಯಿಂದ ಹೊರಗುತ್ತಿಗೆ ನೌಕರರು ದಿನಾಂಕ 10-6-2025ರಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂದು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಏನೇ ಸಮಸ್ಯೆ ಇದ್ದರೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನು ಸಂಪರ್ಕಿಸುವಂತೆ ಹಾಗೂ ಗೈರು ಹಾಜರಾಗುವಂತಹ ನಿರ್ಧಾರ ಕೈಗೊಳ್ಳಬಾರದಾಗಿ ತಿಳಿಸಲಾಗಿದೆ. ಈ ಪ್ರಕಟಣೆಯ ಬಳಿಕವೂ ಇನ್ನೂ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ನೌಕರರೇ ಜವಾಬ್ದಾರರಾಗಿರುತ್ತಾರೆಂದು ತಿಳಿಸಲಾಗಿದೆ.