ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈಗೀಗ ವಿದ್ಯಾವಂತರು ಕೂಡ ಮೋಸಕ್ಕೊಳಗಾಗುವ ಪ್ರಸಂಗಗಳು ಕೂಡ ಹೆಚ್ಚುತ್ತಿದ್ದು,ಆನ್ ಲೈನ್ ಖದೀಮರು ಅಮಾಯಕರಿಗೆ ವಂಚಿಸುತ್ತಿದ್ದಾರೆ.
ಇದೀಗ ಸುಳ್ಯದ ಪಿಸಿಯೋಥೆರಪಿಸ್ಟ್ ಒಬ್ಬರಿಗೆ ಲಕ್ಷಾಂತರ ರೂ. ವಂಚನೆ ಆಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣ ದ್ವಿಗುಣಗೊಳಿಸುವ ಹೆಸರಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿ ಸುಳ್ಯದಲ್ಲಿ ವಾಸವಿದ್ದು ಉಪ್ಪಿನಂಗಡಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. 23ರ ಹರೆಯದ ಯುವಕ. ಎ.18ರಂದು ರೀಲ್ಸ್ ನೋಡುತ್ತಿದ್ದರು. ಈ ವೇಳೆ ಗೇಮಿಂಗ್ ವೆಬ್‌ಸೈಟ್‌ನ ಜಾಹೀರಾತು ನೋಡಿ ಹಣ ದ್ವಿಗುಣಗೊಳಿಸುವ ಉದ್ದೇಶದಿಂದ ಲಿಂಕ್ ಒತ್ತಿದ್ದರು. ಅಲ್ಲಿ ಹಣ ಡೆಪಾಸಿಟ್, ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಸುಳ್ಯದ ಯುವಕ 101 ರೂ.ನಂತೆ 100 ಬಾರಿ ಡೆಪಾಸಿಟ್ ಮಾಡಿದಕ್ಕೆ ಬೋನಸ್ ಹಾಗೂ ಹಾಕಿದ ಹಣ ಸಿಕ್ಕಿತ್ತು.
ಬಳಿಕ ಡೆಪಾಸಿಟ್ ಮಾಡಿದ ಹಣ ವಿತ್ ಡ್ರಾ ಮಾಡಲು ಆಗದೇ ಇದ್ದಾಗ, ಇನ್ನೂ ಹೆಚ್ಚಿನ ಹಣ ಹಾಕಲು ತಿಳಿಸಿದ್ದ ಹಿನ್ನೆಲೆಯಲ್ಲಿ ಮೇ 5ರ ವರೆಗೆ ಹಂತ ಹಂತವಾಗಿ 1,98,000 ರೂ. ಹಣ ಹಾಕಿದ್ದು ವಿತ್ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಹಣ ಡೆಪಾಸಿಟ್ ಮಾಡಲು ಹೇಳಿ ನನಗೆ ವಂಚನೆ ಮಾಡಲಾಗಿದೆ ಎಂದು ಯುವಕ ಇದೀಗ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ.