ನ್ಯೂಸ್ ನಾಟೌಟ್: ಹಲವು ಸಲ ನಮ್ಮ ಆಡಳಿತ ವ್ಯವಸ್ಥೆ ತುಕ್ಕು ಹಿಡಿದೇ ಹೋಗಿರುತ್ತದೆ. ದಪ್ಪ ಚರ್ಮ ಸಲೀಸಾಗಿ ಬೆಂಡಾಗುವುದಿಲ್ಲ ನೋಡಿ. ಎಷ್ಟು ಸಲ ಹೇಳಿದರೂ ಕೇಳದ ಪರಿಸ್ಥಿತಿ ನಿರ್ಮಾಣವಾಗಿರುವುದರ ಪರಿಣಾಮ ಸುಳ್ಯದ ನಗರ ಪಂಚಾಯತ್ ವ್ಯಾಪ್ತಿಯ 20 ಮನೆಗಳು ಕಳೆದ 24 ಗಂಟೆಯಿಂದ ಕತ್ತಲಲ್ಲಿಯೇ ಕೊಳೆಯುವಂತಾಗಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುದ್ಪಾಜೆ ಎಂಬಲ್ಲಿ ರಬ್ಬರ್ ಮರಕ್ಕೆ ಕರೆಂಟ್ ವೈರ್ ತಾಗಿತ್ತು. ಇದರಿಂದ ವಿದ್ಯುತ್ ಟ್ರಿಪ್ ಆಗಿ ಲೈನ್ ಆಫ್ ಆಗಿತ್ತು. ಮರದ ಗೆಲ್ಲನ್ನು ಸ್ಥಳೀಯರು ತೆಗೆದು ಸುಳ್ಯದ ವಿದ್ಯುತ್ ಇಲಾಖೆಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಸರಿ ಮಾಡಿಕೊಡುವಂತೆ ಶನಿವಾರ ಸಂಜೆಯೇ ತಿಳಿಸಿದ್ದಾರೆ. ‘ನಾಳೆ ಬರುತ್ತೇವೆ ಎಂದು ಹೇಳಿದರೂ ಇದುವರೆಗೆ ಬಂದಿಲ್ಲ. ಈಗ ಬರ್ತೇವೆ, ಮತ್ತೆ ಬರ್ತೇವೆ ಅಂಥ ಹೇಳುತ್ತಲೇ ಇದ್ದರೂ ಇದುವರೆಗೂ ಯಾರೂ ಬಂದಿಲ್ಲ. ಮಂಗಳೂರಿನ ಇಲಾಖೆಗೂ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಇನ್ನು ನಾಳೆ ತನಕ ನಮ್ಮ ಮಕ್ಕಳು, ಅನಾರೋಗ್ಯ ಪೀಡಿತ ವೃದ್ದರು ಕತ್ತಲಲ್ಲೇ ಇರಬೇಕು’ ಎಂದು ಸ್ಥಳೀಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.