ನ್ಯೂಸ್ ನಾಟೌಟ್ :ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದರಿಂದ ಅವುಗಳ ಉಪಟಳವೂ ಹೆಚ್ಚುತ್ತಲೇ ಇದೆ.ಹೀಗಾಗಿ ನಾಯಿಗಳನ್ನು ಕಂಡರೆ ಹೌಹಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ಬದಿಯಲ್ಲಿ ನಾಯಿಗಳು ಇಂದು ರಕ್ಕಸ ನಾಯಿಗಳಾಗಿರುವುದೇ ಇದಕ್ಕೆ ಪ್ರಮುಖ ಕಾರಣ.ಇದೀಗ ಸುಳ್ಯದಲ್ಲಿ ಆಡಿನ ಮರಿಯೊಂದರ ಮೇಲೆ ನಾಯಿಗಳ ಗುಂಪೊಂದು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿರುವ ಹೃದಯ ವಿದ್ರಾವಕ ಘಟನೆ(ಮೇ.8)ಬಗ್ಗೆ ವರದಿಯಾಗಿದೆ. ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಡಿನ ಮರಿ ನೋವಿನಲ್ಲಿ ನರಳಾಡಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ.
ಕೂಡಲೇ ಗಾಯಗೊಂಡ ಆಡಿನ ಮರಿಗೆ ಸುಳ್ಯ ಪಶು ಆಸ್ಪತ್ರೆಯ ವೈದ್ಯರು ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆಡಿನ ಮರಿ ಚೇತರಿಸಿಕೊಂಡಿದೆಯೆಂದು ತಿಳಿದು ಬಂದಿದೆ. ಇದೀಗ ರಜಾ ಸಮಯವಾದ್ದರಿಂದ ಪುಟ್ಟ ಪುಟ್ಟ ಮಕ್ಕಳ ಬಗ್ಗೆ ಜಾಗರೂಕರಾಗಬೇಕಾಗಿದೆ. ಈ ಬಗ್ಗೆ ಪೋಷಕರು ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕಾದ ಅನಿವಾರ್ಯತೆ ಇದೆ.ದಾರಿಯಲ್ಲಿ ಮಕ್ಕಳು ಓಡಾಟ ಮಾಡುವಾಗ, ಅಥವಾ ಆಟ ಆಡುವಾಗ ತೀರಾ ಎಚ್ಚರಿಕೆಯಿಂದಿರುವುದು ಒಳಿತು. ಪ್ರತಿ ಬೀದಿಗಳಲ್ಲೂ ನಾಯಿಗಳ ಹಿಂಡು ನೆಲೆಯೂರಿರುವ ಕಾರಣ, ನಿತ್ಯವೂ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಜನರ ಮೇಲೆ ನಾಯಿಗಳು ದಾಳಿ ಮಾಡುತ್ತಾ ಭಯ ಹುಟ್ಟಿಸಿವೆ. ಹೀಗಾಗಿ ನಾಯಿ ಕಡಿತದಿಂದ ಸಹಸ್ರಾರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.ಆಹಾರಕ್ಕಾಗಿ ಸದಾಕಾಲ ಸಂಚರಿಸುವ ನಾಯಿಗಳು ಆಹಾರ ಸಿಗದಿದ್ದಾಗ ಆಕ್ರೋಶಗೊಂಡು ಹಾದಿ-ಬೀದಿಯಲ್ಲಿ ಸಂಚರಿಸುವವರ ಮೇಲೆರಗುವ ಸಾಧ್ಯತೆ ಹೆಚ್ಚಿರುವುದರಿಂದ , ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.